ADVERTISEMENT

ಮಹದಾಯಿ: ವನ್ಯಜೀವಿ ಮಂಡಳಿ ಸಭೆಯಲ್ಲಿ ನಾಡಿದ್ದು ತೀರ್ಮಾನ?

ಕಾರ್ಯಸೂಚಿಯಲ್ಲಿ ಕಳಸಾ ನಾಲಾ ತಿರುವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
<div class="paragraphs"><p>ಮಹದಾಯಿ (ಸಂಗ್ರಹ ಚಿತ್ರ)</p></div>

ಮಹದಾಯಿ (ಸಂಗ್ರಹ ಚಿತ್ರ)

   

ನವದೆಹಲಿ: ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 80ನೇ ಸಭೆ ಇದೇ 9ರಂದು ನವದೆಹಲಿಯಲ್ಲಿ ನಡೆಯಲಿದೆ. ಮಹದಾಯಿ ಯೋಜನೆಯ ಭಾಗವಾದ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವ ಪ್ರಸ್ತಾವನೆಯು ಸಭೆಯ ಕಾರ್ಯಸೂಚಿಯಲ್ಲಿದೆ. 

ನ್ಯಾಯಿಕ ‍ಪ್ರಕ್ರಿಯೆಯಲ್ಲಿನ ಮಧ್ಯಪ್ರವೇಶ (ಸಬ್‌ಜುಡೀಸ್‌) ಆಗುತ್ತದೆ ಎಂಬ ಕಾರಣ ನೀಡಿ ಈ ಯೋಜನೆಗೆ ವನ್ಯಜೀವಿ ಅನುಮೋದನೆ ನೀಡಲು ವನ್ಯಜೀವಿ ಮಂಡಳಿಯು 79ನೇ ಸಭೆಯಲ್ಲಿ ನಿರಾಕರಿಸಿತ್ತು. ಈ ವಿಷಯವ‌ನ್ನು ಮುಂದಿನ ಸಭೆಗೆ ಮುಂದೂಡಲು ತೀರ್ಮಾನಿಸಲಾಗಿತ್ತು. 

ADVERTISEMENT

ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಈ ಯೋಜನೆಗೆ ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್‌ 14ರಂದು 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿತ್ತು. ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್‌ 29ರಂದು ಒಪ್ಪಿಗೆ ನೀಡಿತ್ತು. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ 1.78 ಟಿಎಂಸಿ ಅಡಿ ಮೀಸಲಿಡಲಾಗಿದೆ.

ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಮಂಡಳಿಗೆ ಪ್ರಸ್ತಾವ ಸಲ್ಲಿಸಿತ್ತು. ಈ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 10.68 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತದೆ ಎಂದು ಪ್ರಸ್ತಾವದಲ್ಲಿ ತಿಳಿಸಿತ್ತು. ಇದಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿತ್ತು.

‘ಮಹದಾಯಿ ಯೋಜನಾ ಪ್ರದೇಶದ ವಾಸ್ತವಾಂಶದ ಅಧ್ಯಯನಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತಜ್ಞರ ತಂಡವನ್ನು ಕಳುಹಿಸಿತ್ತು. ಈ ಸಮಿತಿಯು ಹಲವು ಶಿಫಾರಸುಗಳನ್ನು ಮಾಡಿದೆ. ಈ ಬಗ್ಗೆ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಸಬ್‌ಜುಡೀಸ್‌ ಆಗುತ್ತದೆ ಎಂಬ ಕಾರಣ ಮುಂದಿಟ್ಟು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ’ ಎಂದು ವನ್ಯಜೀವಿ ಮಂಡಳಿಯ 79ನೇ ಸಭೆಯಲ್ಲಿ ಚರ್ಚಿಸಲಾಗಿತ್ತು. 

‘ವನ್ಯಜೀವಿ ಅನುಮೋದನೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಹಾಗೂ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಕರ್ನಾಟಕ ಸರ್ಕಾರ, ವಿಳಂಬ ನೀತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಪ್ರಕಟಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.