ADVERTISEMENT

ಹರಿಯಾಣ ವಿಧಾನಸಭೆ ಚುನಾವಣೆ | ನಾಳೆ ಮತದಾನ: ಬಿಜೆಪಿ ಕನಸು ಕಮರಿಸಲು ‘ಕೈ’ ಯತ್ನ

ಬಹಿರಂಗ ಪ್ರಚಾರ ಅಂತ್ಯ;

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 23:30 IST
Last Updated 3 ಅಕ್ಟೋಬರ್ 2024, 23:30 IST
<div class="paragraphs"><p>ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಪಕ್ಷದ ಮುಖಂಡರಾಧ ಕೆ.ಸಿ.ವೇಣುಗೋಪಾಲ್‌ ಹಾಗೂ ಭೂಪಿಂದರ್‌ ಸಿಂಗ್‌ ಚರ್ಚೆಯಲ್ಲಿ ತೊಡಗಿದ್ದರು.</p></div>

ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಪಕ್ಷದ ಮುಖಂಡರಾಧ ಕೆ.ಸಿ.ವೇಣುಗೋಪಾಲ್‌ ಹಾಗೂ ಭೂಪಿಂದರ್‌ ಸಿಂಗ್‌ ಚರ್ಚೆಯಲ್ಲಿ ತೊಡಗಿದ್ದರು.

   

ಪಿಟಿಐ ಚಿತ್ರ 

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದಿದೆ. ಮೂರನೇ ಅವಧಿಗೆ ಅಧಿಕಾರಕ್ಕೆ ಏರುವುದಕ್ಕಾಗಿ ಬಿಜೆಪಿಯಿಂದ ಬಿರುಸಿನ ಪ್ರಚಾರ ನಡೆದರೆ, ಅಧಿಕಾರ ಗದ್ದುಗೆ ಏರುವ ಕೇಸರಿ ಪಕ್ಷದ ಕನಸು ಛಿದ್ರ ಮಾಡಬೇಕು ಎಂಬ ಉಮೇದಿನೊಂದಿಗೆ ಕಾಂಗ್ರೆಸ್‌ ಕೂಡ ಭರ್ಜರಿ ಪ್ರಚಾರ ನಡೆಸಿದೆ.

ADVERTISEMENT

90 ಶಾಸಕರ ಆಯ್ಕೆಗಾಗಿ ಶನಿವಾರ ಮತದಾನ ನಡೆಯಲಿದ್ದು, 2 ಕೋಟಿಯಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅ.8ರಂದು ಮತ ಎಣಿಕೆ ನಡೆಯಲಿದೆ.

2019ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ ಅಗತ್ಯವಿರುವಷ್ಟು ಸ್ಥಾನಗಳನ್ನು ಪಡೆಯುವಲ್ಲಿ ಬಿಜೆಪಿ ವಿಫಲವಾಗಿತ್ತು. ಆದರೆ, ಜೆಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಸರ್ಕಾರ ರಚನೆಗೆ ಬೇಕಾಗಿದ್ದ 46 ಸ್ಥಾನಗಳ ಗಡಿಯನ್ನು ದಾಡಿ, ಅಧಿಕಾರಕ್ಕೆ ಏರಿತ್ತು. 

ಈಗ, ರಾಜಕೀಯ ಸಮೀಕರಣ ಬದಲಾಗಿದ್ದು, ವರ್ಷದ ಆರಂಭದಲ್ಲಿ ಬಿಜೆಪಿ ಜೊತೆಗಿನ ಸಖ್ಯವನ್ನು ಜೆಜೆಪಿ ತೊರೆದಿದೆ.

ಬಹಿರಂಗ ಪ್ರಚಾರ ಅಂತ್ಯಗೊಂಡ ಗುರುವಾರ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನೂಹ್‌ ಮತ್ತು ಭವರಿಯಾದಲ್ಲಿ ಮತ ಯಾಚನೆ ಮಾಡಿದರು. 

ಬಿಜೆಪಿಯ ಹಿರಿಯ ನಾಯಕರ ಪೈಕಿ, ಪ್ರಧಾನಿ ನರೇಂದ್ರ ಮೋದಿ ಕೊನೆ ಎರಡು ದಿನ ರಾಜ್ಯದಲ್ಲಿನ ಪ್ರಚಾರದಿಂದ ದೂರ ಉಳಿದಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಿಂದಿನ ನಾಲ್ಕು ದಿನ ಪ್ರಚಾರ ಕೈಗೊಂಡಿರಲಿಲ್ಲ.

ಹಣಾಹಣಿ: ಹರಿಯಾಣದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ನೇರ ಹಣಾಹಣಿ ಇದೆ. ಇನ್ನೊಂದೆಡೆ, ಆಮ್‌ ಆದ್ಮಿ ಪಕ್ಷ (ಎಎಪಿ), ಜೆಜೆಪಿ–ಎಎಸ್‌ಪಿ(ಕಾಶ್ಶಿರಾಂ) ಮತ್ತು ಐಎನ್‌ಎಲ್‌ಡಿ–ಬಿಎಸ್‌ಪಿ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದಾರೆ.

ಯಾವ ಪಕ್ಷ ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಇದ್ದರೂ, ಒ.ಪಿ.ಚೌಟಾಲಾ ಅವರ ಪುತ್ರರ ನೇತೃತ್ವದ ಐಎನ್‌ಎಲ್‌ಡಿ ಮತ್ತು ಜೆಜೆಪಿ ಪಕ್ಷಗಳು ಎಷ್ಟು ಸ್ಥಾನಗಳನ್ನು ಗೆಲ್ಲಲಿವೆ ಎಂಬುದರ ಮೇಲೆಯೇ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಭಿವಾನಿ ಜಿಲ್ಲೆಯ ದಾಡು ನಗರಿ ಬವಾನಿಖೇಡಾದಲ್ಲಿ ಬಿಜೆಪಿ ಅಭ್ಯರ್ಥಿ ಕಪೂರ್‌ ವಾಲ್ಮೀಕಿ ಪರ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ನಾಯಬ್‌ ಸಿಂಗ್‌ ಸೈನಿ ಮತ ಯಾಚಿಸಿದರು 

ಪಕ್ಷಗಳ ಲೆಕ್ಕಾಚಾರ

ಪ್ರಚಾರ ಕಾಂಗ್ರೆಸ್‌ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ವಿವಿದ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಿವೆ. ಕಾಂಗ್ರೆಸ್‌ ಪಕ್ಷ ಪ್ರಮುಖವಾಗಿ ‘ಜವಾನ್‌–ಕಿಸಾನ್‌–ಪೈಲ್ವಾನ್’(ಸೈನಿಕ ರೈತ ಹಾಗೂ ಕುಸ್ತಿಪಟು) ಅವರಲ್ಲಿನ ಆಕ್ರೋಶದ ಲಾಭ ಪಡೆದು ಬಿಜೆಪಿ ಮಣಿಸಲು ಯತ್ನಿಸಿದೆ. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಾತ್ಮಕ ಬೆಂಬಲ ನೀಡದಿರುವುದು ಹಾಗೂ ತಾವು ನಡೆಸಿದ ಪ್ರತಿಭಟನೆಯನ್ನು ನಿರ್ವಹಣೆ ಮಾಡಿದ ವೈಖರಿ ವಿಚಾರವಾಗಿ ರೈತರಲ್ಲಿ ಬಿಜೆಪಿ ವಿರುದ್ದ ಅಸಮಾಧಾನ ಇದೆ.

ಇನ್ನು ‘ಅಗ್ನಿವೀರ’ ಯೋಜನೆ ಹಾಗೂ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕುರಿತು ನಡೆದ ಕುಸ್ತಿಪಟುಗಳ ಪ್ರತಿಭಟನೆ ನಿರ್ವಹಿಸಿದ ವಿಚಾರವಾಗಿಯೂ ಬಿಜೆಪಿ ವಿರುದ್ಧ ರೈತರಿಗೆ ಸಿಟ್ಟಿದೆ.

ಆದರೆ ಜಾಟ್‌ ಹೊರತುಪಡಿಸಿದಂತೆ ಇತರ ಸಮುದಾಯಗಳ ಮತಗಳು ಈ ಬಾರಿ ತನ್ನ ಕೈಹಿಡಿಯಲಿವೆ. ಇದು ತಾನು ಎದುರಿಸುತ್ತಿರುವ ಅಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೆಸ್‌ನ ತಂತ್ರಗಾರಿಕೆ ಮೆಟ್ಟಿ ನಿಲ್ಲವುದಕ್ಕೂ ನೆರವಾಗಲಿದೆ ಎಂಬುದು ಬಿಜೆಪಿಯ ನಂಬಿಕೆ.

ಪ್ರಮುಖ ಅಂಶಗಳು
  • ಕಾಂಗ್ರೆಸ್‌ ಬಿಜೆಪಿ ಎರಡೂ ಪಕ್ಷಗಳಿಗೆ ಬಣಗಳ ಬಿಸಿ

  • ಕಾಂಗ್ರೆಸ್ ಸಂಸದೆ ಸೆಲ್ಜಾ ಕುಮಾರಿ ಪ್ರಚಾರಸಭೆಗಳಿಂದ ಬಹುತೇಕ ದೂರ ಉಳಿದಿದ್ದರು

  • ಒಳಜಗಳ ಪ್ರಚಾರಸಭೆಗಳ ನಿರ್ವಹಣೆ ವಿಚಾರವಾಗಿ ರಾಹುಲ್‌ ಗಾಂಧಿ ಅಸಮಾಧಾನ ಹೊರಹಾಕಿದ್ದರು ಎಂದು ಮೂಲಗಳ ಹೇಳಿಕೆ

  • ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಮನೋಹರಲಾಲ್‌ ಖಟ್ಟರ್‌ ಅವರನ್ನು ಪಕ್ಷದ ರ‍್ಯಾಲಿಗಳಿಂದ ದೂರ ಇಟ್ಟಿದ್ದ ಬಿಜೆಪಿ

  • ನಾಯಬ್‌ ಸಿಂಗ್‌ ಸೈನಿ ಅವರಿಗೇ ಸಿ.ಎಂ ಪಟ್ಟ– ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಳಿವು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.