ಹೊಸ ವರ್ಷದ ಮೊದಲ ದಿನದಿಂದಲೇ ಜನಸಾಮಾನ್ಯರಿಗೂ ಅನ್ವಯವಾಗುವಂಥ ಕೆಲವು ನೀತಿ–ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಆ ಕುರಿತ ಒಂದಿಷ್ಟು ಮಾಹಿತಿ...
ಫಾಸ್ಟ್ಯಾಗ್ ಕಡ್ಡಾಯ
ಎಲ್ಲಾ ನಾಲ್ಕುಚಕ್ರದ ವಾಹನಗಳಿಗೆ ಜ.1ರಿಂದ ಫಾಸ್ಟ್ಯಾಗ್ ಅನ್ನು ಕಡ್ಡಾಯಗೊಳಿಸಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಇದರ ಜತೆಗೆ ವಾಹನಗಳ ವಿಮೆಯ ಫಾರಂ ನಂ. 51ರಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇನ್ನು ಮುಂದೆ ವಾಹನಗಳಿಗೆ ವಿಮೆ ಮಾಡಿಸಲು ಫಾಸ್ಟ್ಯಾಗ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಲಿದೆ.
ವಾಟ್ಸ್‌ಆ್ಯಪ್ ಸೀಮಿತ
ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ‘ವಾಟ್ಸ್‌ಆ್ಯಪ್’, ಹೊಸವರ್ಷದಲ್ಲಿ ಕೆಲವು ಫೋನ್‌ಗಳಲ್ಲಿ ಕೆಲಸಮಾಡುವುದನ್ನು ನಿಲ್ಲಿಸಲಿದೆ. ಆ್ಯಂಡ್ರಾಯ್ಡ್ ಫೋನ್‌ಗಳಾಗಿದ್ದರೆ ಒಎಸ್ 4.0.3 ಅಥವಾ ಅದಕ್ಕೂ ನಂತರದ ಆವೃತ್ತಿಯ, ಐಫೋನ್ ಆಗಿದ್ದರೆ ಐಒಎಸ್ 9 ಅಥವಾ ಅದರ ನಂತರದ ಆವೃತ್ತಿ, ಕೆಎಐಒಎಸ್ 2.5.1 ಅಥವಾ ಆ ನಂತರದ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಹೊಂದಿದ ಆಯ್ದು ಫೋನ್‌ಗಳನ್ನೇ ಬಳಸುವಂತೆ ಸಂಸ್ಥೆಯು ಗ್ರಾಹಕರಿಗೆ ಸಲಹೆ ನೀಡಿದೆ.
ದುಬಾರಿಯಾಗಲಿವೆ ವಾಹನಗಳು
ದೇಶದ ಕಾರು ತಯಾರಿಕಾ ಸಂಸ್ಥೆಗಳಾದ ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸೇರಿದಂತೆ ಎಲ್ಲಾ ತಯಾರಿಕಾ ಸಂಸ್ಥೆಗಳು ತಮ್ಮ ಕಾರುಗಳ ದರವನ್ನು ಹೊಸ ವರ್ಷದಲ್ಲಿ ಹೆಚ್ಚಿಸಲಿವೆ. ‘ತಯಾರಿಕಾ ವೆಚ್ಚದಲ್ಲಿ ಆಗಿರುವ ಏರಿಕೆಯನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯ’ ಎಂದು ಸಂಸ್ಥೆಗಳು ಹೇಳಿವೆ.
ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಹೀರೊ ಕಾರ್ಪ್ ಸಹ ದ್ವಿಚಕ್ರ ವಾಹನಗಳ ದರವನ್ನು ಸುಮಾರು ₹1,500 ರಷ್ಟು ಹೆಚ್ಚಿಸುವುದಾಗಿ ಹೇಳಿದೆ. ಇತರ ಸಂಸ್ಥೆಗಳೂ ದರ ಹೆಚ್ಚಿಸುವ ಸಾಧ್ಯತೆ ಇದೆ.
ಶೂನ್ಯ (0) ಡಯಲ್ ವ್ಯವಸ್ಥೆ
ದೇಶದಲ್ಲಿ ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವಾಗ ಆರಂಭದಲ್ಲಿ ‘0’ ಸಂಖ್ಯೆಯನ್ನು ಸೇರಿಸಿ ಡಯಲ್ ಮಾಡುವ ವ್ಯವಸ್ಥೆ ಹೊಸವರ್ಷದಲ್ಲಿ ಜಾರಿಗೆ ಬರಲಿದೆ. ಜನವರಿ 1ರಿಂದಲೇ ಈ ಹೊಸ ವ್ಯವಸ್ಥೆಯನ್ನು ಜಾರಿಮಾಡಲು ಸಾಧ್ಯವಾಗುವಂತೆ ತಂತ್ರಜ್ಞಾನದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ಟೆಲಿಕಾಂ ವಿಭಾಗವು ಮೊಬೈಲ್ ಸೇವಾದಾತ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಿದೆ. ಇಂಥ ಬದಲಾವಣೆಗಳನ್ನು ಮಾಡುವಂತೆ ಟ್ರಾಯ್ ಸಲಹೆ ನೀಡಿತ್ತು.
ಕಾಂಟ್ಯಾಕ್ಟ್‌ಲೆಸ್ ಕಾರ್ಡ್ ವಹಿವಾಟು ಮಿತಿ ಹೆಚ್ಚಳ
ಕಾಂಟ್ಯಾಕ್ಟ್‌ಲೆಸ್ ಕಾರ್ಡ್ ವಹಿವಾಟು ಮಿತಿಯು ಜನವರಿ 1ರಿಂದ ₹ 5 ಸಾವಿರ ಇರಲಿದೆ. ಈ ಮೊದಲು ₹ 2 ಸಾವಿರಕ್ಕೆ ಮಿತಿಗೊಳಿಸಲಾಗಿತ್ತು. ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ನಿರ್ಧಾರ ತೆಗೆದುಕೊಂಡಿದೆ.
ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳ ಮೂಲಕ ಈ ರೀತಿಯ ವಹಿವಾಟು ನಡೆಯುತ್ತದೆ. ಪಿಒಎಸ್ ಯಂತ್ರದ ಮುಂದೆ ಕಾರ್ಡ್ ಅನ್ನು ಹಿಡಿಯುವ ಮೂಲಕ ಹಣ ಪಾವತಿ ಸಾಧ್ಯವಾಗುತ್ತದೆ. ಗ್ರಾಹಕರು ಮತ್ತು ವರ್ತಕರ ದೃಷ್ಟಿಯಿಂದ ಇದು ಅತ್ಯಂತ ಸುಲಭ, ಸರಳ ಮತ್ತು ಸುರಕ್ಷಿತವಾದ ಪಾವತಿ ವಿಧಾನ.
ಪಾಸಿಟಿವ್ ಪೇ ಸಿಸ್ಟಂ
ಚೆಕ್ ಮೂಲಕ ನಡೆಯುವ ದೊಡ್ಡ ಮೊತ್ತದ ವಹಿವಾಟುಗಳನ್ನು ಮತ್ತೊಂದು ಸುತ್ತಿನ ಪರಿಶೀಲನೆಗೆ ಒಳಪಡಿಸುತ್ತದೆ ಪಾಸಿಟಿವ್ ಪೇ ಸಿಸ್ಟಂ. ₹ 50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್‌ಗಳಿಗೆ ಈ ವ್ಯವಸ್ಥೆ ಅನ್ವಯವಾಗಲಿದೆ. ಚೆಕ್ ನೀಡಿದ ವ್ಯಕ್ತಿಯು ಆ ಚೆಕ್‌ಗೆ ಸಂಬಂಧಿಸಿದ ಕೆಲವು ಅಗತ್ಯ ವಿವರಗಳನ್ನು ಬ್ಯಾಂಕಿಗೆ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಸಲ್ಲಿಸುತ್ತಾನೆ. ಆತ ಸಲ್ಲಿಸಿದ ವಿವರಗಳು, ಚೆಕ್‌ನಲ್ಲಿ ನಮೂದಾಗಿರುವ ವಿವರಗಳು ಒಂದೇ ಇವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಈ ಸೌಲಭ್ಯವನ್ನು ಪಡೆಯುವುದು ಗ್ರಾಹಕನ ಆಯ್ಕೆಗೆ ಬಿಟ್ಟಿದ್ದು. ಆದರೆ ₹ 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್‌ಗಳಿಗೆ ಬ್ಯಾಂಕ್‌ಗಳು ಪಾಸಿಟಿವ್ ಪೇ ಸಿಸ್ಟಂ ಕಡ್ಡಾಯ ಮಾಡಬಹುದು ಎಂಬ ವರದಿಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.