ADVERTISEMENT

ಕೋವಿಡ್‌: ಮಾರ್ಚ್ 31ರಿಂದ ನಿರ್ಬಂಧಗಳು ತೆರವು, ಮಾಸ್ಕ್‌ ಧರಿಸುವಿಕೆ ಮುಂದುವರಿಕೆ

ಮಾಸ್ಕ್‌ ಧಾರಣೆ, ವ್ಯಕ್ತಿಗತ ಅಂತರ ಮುಂದುವರಿಕೆ: ಗೃಹ ಸಚಿವಾಲಯ

ಪಿಟಿಐ
Published 23 ಮಾರ್ಚ್ 2022, 11:11 IST
Last Updated 23 ಮಾರ್ಚ್ 2022, 11:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಸತತ ಇಳಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ 31ರಿಂದ ಅನ್ವಯವಾಗುವಂತೆ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.

ಆದರೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್‌ ಧರಿಸಬೇಕು ಎಂಬ ನಿಬಂಧನೆಗಳು ಈ ಮೊದಲಿನಂತೆಯೇ ಮುಂದುವರಿಯಲಿವೆ.

ಈ ಸಂಬಂಧ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

‘ಕೋವಿಡ್–19 ಪ್ರಸರಣ ತಡೆಗಾಗಿ ಎರಡು ವರ್ಷಗಳ ಹಿಂದೆ ಹೊರಡಿಸಿದ್ದ ಆದೇಶದ ಅವಧಿ ಮಾರ್ಚ್ 31ಕ್ಕೆ ಅಂತ್ಯವಾಗಲಿದ್ದು, ನಂತರ ಈ ವಿಷಯವಾಗಿ ಸಚಿವಾಲಯ ಯಾವುದೇ ಆದೇಶ ಹೊರಡಿಸುವುದಿಲ್ಲ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ಒಂದು ವೇಳೆ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಲ್ಲಿ, ಸ್ಥಳೀಯವಾಗಿ ಅನ್ವಯವಾಗುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೂಕ್ತ ಕ್ರಮ ಕೈಗೊಳ್ಳಬಹುದು’ ಎಂದು ಅವರು ಸೂಚಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಪ್ರಸರಣವನ್ನು ತಡೆಯುವ ಸಂಬಂಧ ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆ–2005 ರಡಿ 2020ರ ಮಾರ್ಚ್ 24ರಂದು ನಿರ್ಬಂಧಗಳನ್ನು ಜಾರಿಗೊಳಿಸಿ ಆದೇಶಿಸಿತ್ತು. ನಂತರ, ಹಲವಾರು ಬಾರಿ ಈ ನಿರ್ಬಂಧಗಳನ್ನು ಮಾರ್ಪಾಡು ಮಾಡಲಾಗಿತ್ತು.

‘ಕೋವಿಡ್–19ಗೆ ಸಂಬಂಧಿಸಿ ಜನರು ಸಾಕಷ್ಟು ಅರಿವು ಹೊಂದಿದ್ದಾರೆ. ಸೋಂಕು ಪ್ರಸರಣ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ವರ್ತನೆ ಹೇಗಿರಬೇಕು ಎಂಬ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿದೆ’ ಎಂದು ಭಲ್ಲಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಕೋವಿಡ್‌ ಪಿಡುಗಿನ ನಿರ್ವಹಣೆಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಮ್ಮ ಸಾಮರ್ಥ್ಯ ವೃದ್ಧಿಸಿಕೊಂಡಿದ್ದೇವೆ. ರೋಗ ಪತ್ತೆ, ನಿಗಾ ವಹಿಸುವುದು, ಸಂ‍ಪರ್ಕಿತರ ಪತ್ತೆ, ಚಿಕಿತ್ಸೆ, ಲಸಿಕೆ ನೀಡುವುದು ಹಾಗೂ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಳ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹ ಗಮನಾರ್ಹ ಸಾಧನೆ ಕಾಣಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.