ADVERTISEMENT

ಸೋನಿಯಾಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ವಾಪಸ್: ಕಾಂಗ್ರೆಸ್‌ ಟೀಕೆ

ಇನ್ನು ಮುಂದೆ ‘ಝಡ್ ಪ್ಲಸ್‌’ ಭದ್ರತೆ ಮಾತ್ರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 18:46 IST
Last Updated 8 ನವೆಂಬರ್ 2019, 18:46 IST
   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುಟುಂಬದ ಸದಸ್ಯರಿಗೆ ನೀಡಲಾಗಿದ್ದ ವಿಶೇಷ ರಕ್ಷಣಾ ಪಡೆಯ (ಎಸ್‌ಪಿಜಿ) ಭದ್ರತೆ ವಾಪಸು ಪಡೆದಿರುವ ಕೇಂದ್ರ ಸರ್ಕಾರ, ಇನ್ನು ಮುಂದೆ ಸಿಆರ್‌ಪಿಎಫ್‌ನಿಂದ ‘ಝಡ್‌ ಪ್ಲಸ್’ ಭದ್ರತೆ ಮಾತ್ರ ನೀಡಲಿದೆ.

ಕೇಂದ್ರದ ಈ ನಿರ್ಧಾರದಿಂದ ಸುಮಾರು ಮೂರು ಸಾವಿರ ಯೋಧರನ್ನು ಹೊಂದಿರುವ ಎಸ್‌ಪಿಜಿ, ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ವ್ಯವಸ್ಥೆಯನ್ನು ಮಾತ್ರ ಕೈಗೊಳ್ಳಲಿದೆ.

ಸೋನಿಯಾ ಗಾಂಧಿ, ಮುಖಂಡರಾದ ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಹಲವು ಸಂದರ್ಭಗಳಲ್ಲಿ ಎಸ್‌ಪಿಜಿಗೆ ಸಹಕಾರ ನೀಡಿಲ್ಲ. ಕೊನೆ ಕ್ಷಣದಲ್ಲಿ ಪ್ರವಾಸದ ಮಾಹಿತಿ ನೀಡುತ್ತಿದ್ದರಿಂದ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗುತ್ತಿತ್ತು. ಜತೆಗೆ, ಗಾಂಧಿ ಕುಟುಂಬಕ್ಕೆ ಈಗ ಗಂಭೀರವಾದ ಬೆದರಿಕೆ ಇಲ್ಲ. ಆದ್ದರಿಂದ, ಈ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕಳೆದ 28 ವರ್ಷಗಳಿಂದ ಈ ಮೂವರಿಗೂ ಎಸ್‌ಪಿಜಿ ಭದ್ರತೆ ಒದಗಿಸಲಾಗಿತ್ತು. ಮಾಜಿ ಪ್ರಧಾನಿಗಳ ತಕ್ಷಣದ ಕುಟುಂಬದ ಸದಸ್ಯರನ್ನು ಅತಿ ಗಣ್ಯರ ಪಟ್ಟಿಗೆ ಸೇರಿಸಿ 1991ರ ಸೆಪ್ಟೆಂಬರ್‌ನಲ್ಲಿ ಎಸ್‌ಪಿಜಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಈ ಕಾಯ್ದೆ ಅನ್ವಯ ಗಾಂಧಿ ಕುಟುಂಬದ ಸದಸ್ಯರನ್ನು ಅತಿ ಗಣ್ಯರ ಪಟ್ಟಿಗೆ ಸೇರಿಸಲಾಗಿತ್ತು. 1991ರ ಮೇ 21ರಂದು ಎಲ್‌ಟಿಟಿಇ ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಹತ್ಯೆ ನಡೆಸಿದ ಬಳಿಕ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿತ್ತು. ಎಸ್‌ಪಿಜಿ ಪಡೆ ಹೈಟೆಕ್‌ ವಾಹನಗಳು, ಜಾಮರ್‌ಗಳು ಮತ್ತು ಆಂಬ್ಯುಲೆನ್ಸ್‌ ವ್ಯವಸ್ಥೆ ಹೊಂದಿರುತ್ತದೆ.

ಎಸ್‌ಪಿಜಿ ವಾಪಸ್‌ ಪಡೆಯುವ ನಿರ್ಧಾರಕ್ಕೆ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಯುವ ಕಾಂಗ್ರೆಸ್‌ ಕಾರ್ಯಕರ್ತರು ದೆಹಲಿಯ ಗೃಹ ಸಚಿವರ ಅಧಿಕೃತ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.

ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರಿಗೆ ಒದಗಿಸಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಇದೇ ವರ್ಷದ ಆಗಸ್ಟ್‌ನಲ್ಲಿ ವಾಪಸ್‌ ಪಡೆಯಲಾಗಿತ್ತು.

ಭದ್ರತೆ ನಿರ್ಲಕ್ಷ್ಯಸಿದ್ದ ಗಾಂಧಿ ಕುಟುಂಬ: ಕೇಂದ್ರ ದೂರು
‘ರಾಹುಲ್‌ಗಾಂಧಿ ಅವರು 2015ರಿಂದ 2019ರ ಅವಧಿಯಲ್ಲಿ ದೆಹಲಿಯಲ್ಲಿ ಪ್ರವಾಸ ಮಾಡಿದ ಸಂದರ್ಭಗಳಲ್ಲಿ 1,892 ಬಾರಿ ಗುಂಡು ನಿರೋಧಕ ವಾಹನವನ್ನು ಬಳಸಿಲ್ಲ. ಈ ವರ್ಷ ಇಲ್ಲಿಯವರೆಗೂ 247 ಬಾರಿ ಗುಂಡು ನಿರೋಧಕ ವಾಹನವಿಲ್ಲದೇ ಪ್ರವಾಸ ಮಾಡಿದ್ದಾರೆ’ ಎಂದು ಅಧಿಕಾರಿಗಳು ದೂರಿದ್ದಾರೆ.

2005–14ರ ಅವಧಿಯಲ್ಲಿ ದೇಶದಲ್ಲಿ ವಿವಿಧ 18 ಸ್ಥಳಗಳಿಗೆ ಭೇಟಿ ನೀಡಿದ್ದು, ಎಸ್‌ಪಿಜಿ ಅನುಮೋದನೆ ನೀಡದಿರುವ ವಾಹನ ಬಳಕೆ ಮಾಡಿದ್ದಾರೆ. ದೆಹಲಿ ಹೊರಗಡೆ ಪ್ರವಾಸ ಮಾಡುವಾಗ 247 ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ್ದಾರೆ ಎಂದು ವಿವರಿಸಿವೆ.

ಗುಜರಾತ್‌ನ ಬನಸ್‌ಕಾಂತಾದಲ್ಲಿ ರಾಹುಲ್‌ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆದಿದ್ದ 2017ರ ಆ. 4ರ ಪ್ರಕರಣ ಉಲ್ಲೇಖಿಸಿ, ರಾಹುಲ್‌ ಬುಲೆಟ್ ನಿರೋಧಕ ವಾಹನ ಬಳಸಿದ್ದರೆ ಆಗ ಎಸ್‌ಪಿಜಿ ಸಿಬ್ಬಂದಿ ಗಾಯಗೊಳ್ಳುವುದು ತಪ್ಪುತ್ತಿತ್ತು ಎಂದಿದೆ.

ರಾಹುಲ್‌ಗಾಂಧಿ ಅವರು ಹಲವು ಬಾರಿ ವಾಹನ ಮೇಲೆ ಹತ್ತಿ ಪ್ರಯಾಣಿಸಿದ್ದು, ಭದ್ರತಾ ಸಿಬ್ಬಂದಿ ಸಲಹೆಯನ್ನು ಅಲ್ಲಗಳೆದಿದ್ದಾರೆ. ಅಲ್ಲದೆ, ಮೋಟರ್‌ ವಾಹನಗಳ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ.

ಸೋನಿಯಾಗಾಂಧಿ ಅವರು 50 ಬಾರಿ ದೆಹಲಿ ಪ್ರವಾಸದ ಸಂದರ್ಭದಲ್ಲಿ ಎಸ್‌ಪಿಜಿ ವಾಹನ ಬಳಸಿಲ್ಲ. 2019ರಲ್ಲಿ ಒಂದು ಬಾರಿ ರಾಹುಲ್‌ಗಾಂಧಿ ಬುಲೆಟ್ ನಿರೋಧಕವಲ್ಲದ ಕಾರು ಚಾಲನೆ ಮಾಡಿದ್ದಾರೆ. ಸೋನಿಯಾ ಕೆಳದ ಐದು ವರ್ಷಗಳಲ್ಲಿ 13 ಬಾರಿ ಏಕಾಏಕಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಪ್ರಿಯಾಂಕಾಗಾಂಧಿ 1991ರಿಂದಲೂ 339 ಬಾರಿ ದೆಹಲಿಯಲ್ಲಿ, 64 ಬಾರಿ ಹೊರಗಡೆ, 99 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. 21 ಬಾರಿ ಮಾತ್ರವೇ ಎಸ್‌ಪಿಜಿ ಭದ್ರತೆ ಬಳಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

**

ಇದು ಸರ್ಕಾರದ ಕ್ರೂರ ನಿರ್ಧಾರ. ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಈ ರೀತಿ ದ್ವೇಷ ಸಹಿಸಲು ಸಾಧ್ಯವಿಲ್ಲ.
-ಕೆ.ಸಿ. ವೇಣುಗೋಪಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ

**

ಪ್ರಧಾನಿಯಾಗಿದ್ದಾಗಲೇ ಇಂದಿರಾ, ರಾಜೀವ್‌ ಹತ್ಯೆಯಾಗಿದೆ. ಜೀವಕ್ಕೆ ಅಪಾಯವಿದೆ ಎಂದೇ ಅವರ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿತ್ತು.
-ಸಿದ್ದರಾಮಯ್ಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.