ನವದೆಹಲಿ: ಕಾಂಗ್ರೆಸ್ ಪಕ್ಷವು ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ 'ಪಿತಾಮಹ' ಆಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವ್ಯಂಗ್ಯವಾಡಿದ್ದಾರೆ.
'ನೀಟ್ ಪ್ರಶ್ನೆ ಪತ್ರಿಕೆ ವ್ಯವಸ್ಥಿತವಾಗಿ ಸೋರಿಕೆಯಾಗಿರುವುದಕ್ಕೆ ದಾಖಲೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್‌ಗೆ ನಂಬಿಕೆಯಿಲ್ಲ. ಕನಿಷ್ಠ ಪಕ್ಷ ಸುಪ್ರೀಂ ಕೋರ್ಟ್ ಮೇಲೂ ನಂಬಿಕೆಯಿಲ್ಲ. ನೀಟ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ವಿದ್ಯಾರ್ಥಿಗಳ ಸೋಲಲ್ಲ. ಬದಲಾಗಿ ಕಾಂಗ್ರೆಸ್‌ನ ಬೇಜವಾಬ್ದಾರಿ, ಭ್ರಮೆ ಹಾಗೂ ತುಷ್ಟೀಕರಣ ರಾಜಕಾರಣದ ಸೋಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಧರ್ಮೇಂದ್ರ ಪ್ರಧಾನ್ ಪ್ರಸ್ತಾಪಿಸಿದ್ದಾರೆ.
'ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಡೆದಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅರಿವಿಲ್ಲವೇ? ಈ ಬಗ್ಗೆ ಮೌನ ವಹಿಸಿದ್ದೇಕೆ ? ಕಾಂಗ್ರೆಸ್ ಪಕ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ಪಿತಾಮಹ ಆಗಿದೆ' ಎಂದು ಆರೋಪಿಸಿದ್ದಾರೆ.
'ಖರ್ಗೆ ಅಥವಾ ರಾಹುಲ್ ಗಾಂಧಿ ಆಗಿರಬಹುದು. ಅವರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿತರಾಗಿಲ್ಲ. ಅವರು ತಮ್ಮ ಕುಟುಂಬದ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
'ಸತತ ಮೂರನೇ ಬಾರಿಗೆ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸಿದ್ದಾರೆ. ಸೋಲನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸುಳ್ಳು ಹಾಗೂ ಅರ್ಧ ಸತ್ಯವನ್ನು ಹೇಳುತ್ತಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.