ನವದೆಹಲಿ: ನಮೀಬಿಯಾದಿಂದ ಕರೆತರಲಾಗಿದ್ದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಿದ್ದನ್ನು ಕಾಂಗ್ರೆಸ್ ‘ತಮಾಷೆ’ಎಂದು ಜರಿದಿದೆ.
ರಾಷ್ಟ್ರೀಯ ಸಮಸ್ಯೆಗಳು ಮತ್ತು 'ಭಾರತ್ ಜೋಡೊ ಯಾತ್ರೆ'ಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತೊಂದು ಪ್ರಯತ್ನವಾಗಿದೆ ಎಂದು ಅದು ಟೀಕಿಸಿದೆ.
‘ಪ್ರಧಾನಿ ನರೇಂದ್ರ ಮೋದಿಯವರು ಆಡಳಿತದಲ್ಲಿ ನಿರಂತರತೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಚೀತಾ ಯೋಜನೆ ಹೊಸ ಉದಾಹರಣೆಯಾಗಿದೆ’ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಆರೋಪಿಸಿದ್ಧಾರೆ.
‘2008-09ರಲ್ಲಿ 'ಚೀತಾ ಯೋಜನೆ' ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಅದಕ್ಕೆ ಅನುಮೋದನೆ ನೀಡಿತ್ತು ಈ ಸಂಬಂಧ 2010ರ ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಚೀತಾ ಔಟ್‌ರೀಷ್ ಸೆಂಟರ್‌ಗೆ ಭೇಟಿ ನೀಡಿದ್ದೆ’ಎಂದು ಚಿತ್ರ ಸಹಿತ ಅಂದಿನ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.
‘ಚೀತಾ ಬಿಡುಗಡೆ ಹೆಸರಲ್ಲಿ ಇಂದು ಪ್ರಧಾನಮಂತ್ರಿಯವರು ಮಾಡಿರುವ ತಮಾಷೆಯು ಅನಗತ್ಯವಾಗಿತ್ತು. ಇದು ರಾಷ್ಟ್ರೀಯ ಸಮಸ್ಯೆಗಳು ಮತ್ತು ಭಾರತ್ ಜೋಡೊ ಯಾತ್ರೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ’ಎಂದು ಅವರು ಟೀಕಿಸಿದ್ದಾರೆ.
‘ಚೀತಾ ಯೋಜನೆಯು ಅತ್ಯುತ್ತಮವೆಂದು ನಾನು ಟೀಕಾಕಾರರಿಗೆ ಹೇಳುತ್ತೇನೆ’ಎಂದು ಅವರು ಹೇಳಿದ್ದಾರೆ.
ಚೀತಾಗಳ ಮರುಪರಿಚಯ ಕಾರ್ಯಕ್ರಮದಡಿ ಶನಿವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ಎಂಟು ಚೀತಾಗಳನ್ನು ನಮೀಬಿಯಾದಿಂದ ಗ್ವಾಲಿಯರ್‌ಗೆ ತರಲಾಯಿತು. ಬಳಿಕ, ಅವುಗಳನ್ನು ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ಗಳಲ್ಲಿ ಶಿಯೋಪುರ್ ಜಿಲ್ಲೆಯ ಕುನೊ ಮತ್ತು ಪಾಲ್ಪುರ್ ಉದ್ಯಾನಕ್ಕೆ ಸ್ಥಳಾಂತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.