ನವದೆಹಲಿ: ಮಹಿಳಾ ವಿಜ್ಞಾನಿಗಳು ಕೈಗೊಳ್ಳುವ ಸಂಶೋಧನೆಗೆ ಹಣಕಾಸು ನೆರವು ಒದಗಿಸುವ ವಿಶೇಷ ವ್ಯವಸ್ಥೆಯನ್ನು (ಸಿಎಸ್‌ಐಆರ್–ಆಸ್ಪೈರ್) ಕೇಂದ್ರೀಯ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಗುರುವಾರ ಘೋಷಿಸಿದೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಿಎಸ್‌ಐಆರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಈ ವ್ಯವಸ್ಥೆ ಕುರಿತು ಘೋಷಣೆ ಮಾಡಿದರು.
‘ಮಹಿಳಾ ವಿಜ್ಞಾನಿಗಳಿಗಾಗಿಯೇ ಅಭಿವೃದ್ಧಿಪಡಿಸಲಾದ ವಿಶೇಷ ಪೋರ್ಟಲ್ ಏಪ್ರಿಲ್ 1ರಿಂದ ಕಾರ್ಯಾರಂಭ ಮಾಡಲಿದೆ. ಸಿಬ್ಬಂದಿ ವೆಚ್ಚ, ಉಪಕರಣಗಳು ಸೇರಿದಂತೆ ಸಂಶೋಧನೆಗೆ ಅಗತ್ಯವಿರುವ ಹಣಕಾಸು ನೆರವಿಗಾಗಿ ಈ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನೆರವಿನ ಮೊತ್ತವು ₹ 25 ಲಕ್ಷದಿಂದ ₹ 30 ಲಕ್ಷದ ವರೆಗೆ ಇರಲಿದೆ’ ಎಂದು ಹೇಳಿದರು.
ಜೀವವಿಜ್ಞಾನ, ರಸಾಯನ ವಿಜ್ಞಾನ, ಭೌತವಿಜ್ಞಾನ, ಎಂಜಿನಿಯರಿಂಗ್ ಹಾಗೂ ಅಂತರ್ ಶಿಸ್ತೀಯ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಳ್ಳುವ ಮಹಿಳಾ ವಿಜ್ಞಾನಿಗಳು ಈ ವ್ಯವಸ್ಥೆಯಡಿ ಹಣಕಾಸು ನೆರವು ಪಡೆಯಲು ಅರ್ಹರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.