ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಶನಿವಾರ (ನ.23) ನಡೆಯಲಿದೆ.
ಲೋಕಸಭಾ ಚುನಾವಣೆಯಲ್ಲಿ ಎದುರಿಸಿದ ಆಘಾತದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಚೇತರಿಸಿಕೊಳ್ಳಲಿದೆಯೇ ಅಥವಾ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲಿದೆಯೇ ಎಂಬುದು ಈ ಫಲಿತಾಂಶದಿಂದ ಗೊತ್ತಾಗಲಿದೆ.
ಮತ ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಆರಂಭ ವಾಗಲಿದ್ದು, ಯಾವ ಪಾಳಯ ಸರಳ ಬಹು ಮತದತ್ತ ಸಾಗುತ್ತಿದೆ ಎಂಬುದು ಮಧ್ಯಾಹ್ನದ ವೇಳೆಗೆ ಬಹುತೇಕ ನಿಚ್ಚಳವಾಗಲಿದೆ.
ಇದೇ ವೇಳೆ, 48 ವಿಧಾನಸಭಾ ಕ್ಷೇತ್ರಗಳು ಹಾಗೂ 2 ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ ಮತ ಎಣಿಕೆ ಕೂಡ ಶನಿವಾರ ನಡೆಯಲಿದೆ. ಈ ಉಪಚುನಾವಣೆಯ ಫಲಿತಾಂಶವು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಾಯಕತ್ವದ ಮೇಲೂ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜನಾದೇಶ ತಮ್ಮ ಪರವಾಗಿಯೇ ಇರಲಿದೆ ಎಂದು ಎನ್‌ಡಿಎ ಹಾಗೂ ‘ಇಂಡಿಯಾ’ ಒಕ್ಕೂಟ ಎರಡೂ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದ ಮೇಲೂ ಈ ಫಲಿತಾಂಶವು ಪ್ರಭಾವ ಬೀರುವ ನಿರೀಕ್ಷೆ ಇದೆ.
ಅದಾನಿ ಸಮೂಹದ ವಿರುದ್ಧದ ಆರೋಪಗಳು, ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿರುವುದು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಟ್ಟಿ ಹಾಕಲು ಸಜ್ಜಾಗಿವೆ.
ಮಹಾರಾಷ್ಟ್ರ: ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ, ಮಹಾವಿಕಾಸ ಅಘಾಡಿಯು (ಎಂವಿಎ) ಬಿಜೆಪಿ ನೇತೃತ್ವದ ‘ಮಹಾಯುತಿ’ಯನ್ನು ಅಧಿಕಾರದಿಂದ ಕೆಳಗಿಳಿಸುವ ಉಮೇದು ಹೊಂದಿದೆ. ಆದರೆ, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮಹಾಯುತಿಗೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.
ಫಲಿತಾಂಶ ಯಾವ ಮೈತ್ರಿಕೂಟದ ಪರವಾಗಿ ಬಂದರೂ, ಅಂತಿಮವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದೇ ಕುತೂಹಲದ ವಿಷಯ.
ಜಾರ್ಖಂಡ್: ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ, ಜೆಎಂಎಂ ಮುಂದಾಳತ್ವದ ‘ಇಂಡಿಯಾ’ ಮೈತ್ರಿಕೂಟ ಮತ್ತೆ ಅಧಿಕಾರದ ಗದ್ದುಗೆ ಏರುವುದನ್ನು ತಡೆಯುವ ವಿಶ್ವಾಸದಲ್ಲಿದೆ.
‘ಇಂಡಿಯಾ’ ಮೈತ್ರಿಕೂಟ ಮತ್ತೆ ಅಧಿಕಾರ ಬರುವ ಸಾಧ್ಯತೆಗಳು ಕ್ಷೀಣ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಒಂದು ವೇಳೆ, ಬಹುಮತ ಪಡೆದಲ್ಲಿ, ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರೇ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವರು ಎನ್ನಲಾಗುತ್ತಿದೆ.
ಒಂದು ವೇಳೆ, ಎನ್‌ಡಿಎಗೆ ಬಹುಮತ ಸಿಕ್ಕಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಬಿಜೆಪಿ ಬಹಿರಂಗಪಡಿಸಿಲ್ಲ.
ಉಪಚುನಾವಣೆ: ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸಿರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರ ಉಪಚುನಾವಣೆ ಸಾಕಷ್ಟು ಗಮನ ಸೆಳೆದಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಈ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಪ್ರಿಯಾಂಕಾ ಗಾಂಧಿ ಅವರು ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯೊಂದರಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ.
‘ಪ್ರಿಯಾಂಕಾ ಗಾಂಧಿ ಅವರ ಗೆಲುವು ನಿಶ್ಚಿತ. ಅವರು ಎಷ್ಟು ಮತಗಳ ಅಂತರದಿಂದ ಗೆಲ್ಲುವರು ಎಂಬುದೇ ನಮ್ಮ ಮುಂದಿರುವ ಪ್ರಶ್ನೆ’ ಎಂದು ಕಾಂಗ್ರೆಸ್ ವಿಶ್ವಾಸದಿಂದ ಹೇಳುತ್ತಿದೆ.
ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿದ್ದು, ಈ ಮೊದಲು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆದ್ದಿದ್ದರು.
‘ಮಹಾ’ ಸಿ.ಎಂ ಆಯ್ಕೆಗೆ ಸೂತ್ರ ಯಾವುದು?
ಬಿಜೆಪಿ ನೇತೃತ್ವದ ಮಹಾಯುತಿ ಇಲ್ಲವೇ ಕಾಂಗ್ರೆಸ್–ಶಿವಸೇನಾ(ಯುಬಿಟಿ) ಹಾಗೂ ಎನ್‌ಸಿಪಿ(ಶರದ್ ಪವಾರ್) ಪಕ್ಷಗಳನ್ನು ಒಳಗೊಂಡ ಎಂವಿಎ ಪೈಕಿ ಯಾವುದೇ ಮೈತ್ರಿಕೂಟಕ್ಕೆ ಬಹುಮತ ಲಭಿಸಿದರೂ, ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುವ ಅಂಶಗಳು ಯಾವವು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಂಖ್ಯಾ ಬಾಹುಳ್ಯವೇ, ಸ್ಟ್ರೈಕ್ ರೇಟ್ ಇಲ್ಲವೇ ನಿಷ್ಠೆ ಮಾನದಂಡದ ಆಧಾರದಲ್ಲಿ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಇನ್ನೊಂದೆಡೆ, ಫಲಿತಾಂಶದ ನಂತರ ಮಹಾರಾಷ್ಟ್ರವು ಮತ್ತಷ್ಟು ‘ರಾಜಕೀಯ ಮರುಹೊಂದಾಣಿಕೆ’ಗೆ ಸಾಕ್ಷಿಯಾಗಲಿದೆಯೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಲೆಕ್ಕಾಚಾರ: ಒಂದು ವೇಳೆ ಪಕ್ಷವು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದಲ್ಲಿ, ಮಿತ್ರ ಪಕ್ಷಗಳಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಬಿಜೆಪಿ ನಾಯಕತ್ವ ಸಿದ್ಧವಿಲ್ಲ ಎನ್ನಲಾಗುತ್ತಿದೆ.
ಪಕ್ಷದ ಕಾರ್ಯಕರ್ತರು ಹಾಗೂ ಹಲವು ಮುಖಂಡರು, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೇ ಮುಖ್ಯಮಂತ್ರಿಯಾಗಬೇಕು ಎಂಬ ಒಲವು ವ್ಯಕ್ತಪಡಿಸಿದ್ದಾರೆ.
‘ಮಹಾಯುತಿ’ಯ ಭಾಗವಾಗಿರುವ ಶಿವಸೇನಾ(ಶಿಂದೆ ಬಣ)ದ ನಾಯಕ, ಹಾಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಎರಡನೇ ಅವಧಿಗೆ ಸಿ.ಎಂ ಕುರ್ಚಿ ಏರುವ ಬಯಕೆ ಹೊಂದಿದ್ದಾರೆ. ಎಂವಿಎ ಅಂಗಪಕ್ಷ ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.