ADVERTISEMENT

ನ್ಯೂಸ್‌ಪ್ರಿಂಟ್‌ ಮೇಲಿನ ಶೇ 5 ಸುಂಕ ಹಿಂಪಡೆಯಲು ಐಎನ್‌ಎಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 16:18 IST
Last Updated 4 ಮಾರ್ಚ್ 2024, 16:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದಿನಪತ್ರಿಕೆಗಳ ಮುದ್ರಣ ಕಾಗದದ (ನ್ಯೂಸ್‌ಪ್ರಿಂಟ್‌) ಮೇಲೆ ವಿಧಿಸಿರುವ ಶೇ 5ರಷ್ಟು ಸುಂಕವನ್ನು ಹಿಂಪಡೆಯಬೇಕು ಎಂದು ಇಂಡಿಯನ್‌ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್‌) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಸುಂಕವನ್ನು ಹಿಂಪಡೆಯುವ ಕ್ರಮದಿಂದ ಮದ್ರಣ ಮಾಧ್ಯಮ ಉದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಸಾರ್ವಜನಿಕರಿಗೆ ವಿಶ್ವಾಸಾರ್ಹವಾದ ಸುದ್ದಿಯನ್ನು ಒದಗಿಸಲು ಇದು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಈ ಕುರಿತ ಹೇಳಿಕೆಯಲ್ಲಿ ‘ಐಎನ್‌ಎಸ್‌’ ಅಧ್ಯಕ್ಷ ರಾಕೇಶ್‌ ಶರ್ಮಾ ಅವರು, ರೂಪಾಯಿ ಮೌಲ್ಯ ಕುಸಿತದ ಪರಿಣಾಮ ನ್ಯೂಸ್‌ಪ್ರಿಂಟ್‌ನ ದರವು ಏರುಮುಖವಾಗಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು, ಉಕ್ರೇನ್–ರಷ್ಯಾ ಯುದ್ಧ, ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಕಾರಣಗಳಿಂದಾಗಿ ನ್ಯೂಸ್‌ಪ್ರಿಂಟ್‌ ಖರೀದಿಗೆ ಈಗಾಗಲೇ ನೀಡಿದ್ದ ಕಾರ್ಯಾದೇಶಗಳು ರದ್ದಾಗುತ್ತಿವೆ’ ಎಂದು ತಿಳಿಸಿದ್ದಾರೆ.

ಈ ಎಲ್ಲ ಪರಿಣಾಮವಾಗಿ ಪ್ರಕಾಶಕರ ಮೇಲೆ ಹೊರೆ ಅನಗತ್ಯವಾಗಿ ಹೆಚ್ಚಾಗಿದೆ. ವಿಶ್ವದಾದ್ಯಂತ ಇರುವ ಅನೇಕ ನ್ಯೂಸ್‌ಪ್ರಿಂಟ್‌ ಕಾರ್ಖಾನೆಗಳು ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿವೆ ಅಥವಾ ಉತ್ಪಾದನೆಯನ್ನೇ ನಿಲ್ಲಿಸಿವೆ ಎಂದೂ ಉಲ್ಲೇಖಿಸಿದ್ದಾರೆ. 

ರೂಪಾಯಿ ಮೌಲ್ಯವು ಕುಸಿಯುತ್ತಿರುವುದು ನ್ಯೂಸ್‌ಪ್ರಿಂಟ್‌ಗಳ ಆಮದನ್ನೇ ಅವಲಂಬಿಸಿರುವ ಮುದ್ರಣ ಮಾಧ್ಯಮ ಉದ್ಯಮದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ರೂಪಾಯಿ ವಿನಿಮಯ ದರದ ಏರಿಳಿತದಿಂದಾಗಿ ವೆಚ್ಚವೂ ಹೆಚ್ಚುತ್ತಿದೆ ಎಂದು ಗಮನಸೆಳೆದಿದ್ದಾರೆ.

ಪ್ರಜಾಪ್ರಭುತ್ವದ ಹಿತರಕ್ಷಣೆ ದೃಷ್ಟಿಯಿಂದಲೂ ಮುದ್ರಣಮಾಧ್ಯಮ ಉದ್ಯಮದ ಉಳಿವು ಅಗತ್ಯವಾಗಿದೆ. ಈ ಉಧ್ಯಮವು ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಮಾಹಿತಿಗಳನ್ನು ಒದಗಿಸುತ್ತಿದೆ. ಈ ಮೂಲಕ ಸರ್ಕಾರದ ಸಂವಹನ ಚಟುವಟಿಕೆಗೆ ನೆರವಾಗುತ್ತಿದೆ. ಜನರಿಗೆ ಸರ್ಕಾರದ ನೀತಿಗಳು ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಪ್ರಿಂಟ್‌ಗಳ ಮೇಲಿನ ಸುಂಕ ಹಿಂಪಡೆಯಬೇಕು ಎಂದು ಕೋರಿರುವ  ಅವರು,  ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳು ವ್ಯಾಪಕವಾಗುತ್ತಿರುವ ಈಗಿನ ಸಂದರ್ಭದಲ್ಲಿ ಮುದ್ರಣ ಮಾಧ್ಯಮವು ಹೆಚ್ಚು ನಂಬಿಕೆ, ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಅಲ್ಲದೆ, ವಿಶಾಲವಾದ ಓದುಗರ ಬಳಗವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

ಸುಂಕವನ್ನು ಹಿಂಪಡೆಯುವುದರಿಂದ ಉದ್ಯಮಕ್ಕೆ ದೊಡ್ಡ ಅನುಕೂಲವಾಗಲಿದೆ. ಪ್ರಕಾಶಕರು ತಮ್ಮ ನಿರ್ವಹಣಾ ವೆಚ್ಚ ನಿಭಾಯಿಸಲು ಹಾಗೂ ಜನತೆಗೆ ವಿಶ್ವಾಸಾರ್ಹವಾದ ಸುದ್ದಿಯನ್ನು ಒದಗಿಸುವುದು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.