‘ದಿ ಕೇರಳ ಸ್ಟೋರಿ‘ ಸಿನಿಮಾದ ಬಗ್ಗೆ ಪರ–ವಿರೋಧ ಚರ್ಚೆಗಳು ನಡೆಯುತ್ತಿರುವುದರ ನಡುವೆಯೇ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ವಿವಾಹದ ವಿಡಿಯೊವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸುದೀಪ್ತೋ ಸೇನ್ ‘ದಿ ಕೇರಳ ಸ್ಟೋರಿ‘ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಿಂದೂ ಮಹಿಳೆಯರನ್ನು ಲವ್ ಜಿಹಾದ್‌ಗೆ ಒಳಪಡಿಸಿ ನಂತರ ಅವರನ್ನು ಐಎಸ್ ಉಗ್ರಗಾಮಿ ಸಂಘಟನೆಗೆ ಸೇರಿಸಿ ಚಿತ್ರಹಿಂಸೆ ನೀಡುವ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ ಎನ್ನಲಾಗುತ್ತಿದೆ. ಮೇ 5ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಈ ಸಿನಿಮಾದ ವಿರುದ್ಧ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಬೆಳವಣಿಗೆಯ ನಡುವೆಯೇ ಎ.ಆರ್. ರೆಹಮಾನ್ ವಿಡಿಯೊವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಮಾನವೀಯತೆಯ ಮೇಲಿನ ಪ್ರೀತಿಯು ಬೇಷರತ್ತಾಗಿರಬೇಕು ಮತ್ತು ಸಾಮರಸ್ಯ ತರುವಂತಾಗಬೇಕು‘ ಎಂದು ಬರೆದುಕೊಂಡಿದ್ದಾರೆ.
ಏನಿದು ವಿಡಿಯೊ
2020ರಲ್ಲಿ ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ವಿವಾಹದ ವಿಡಿಯೊ. ಅಂಜು ಮತ್ತು ಶರತ್ ಎಂಬುವವರು ಕೇರಳದ ಅಲಪ್ಪುಳದ ಚೆರುವಳ್ಳಿ ಮುಸ್ಲಿಂ ಜಮಾತ್ ಮಸೀದಿಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ವಧುವಿನ ತಾಯಿ ಬಡವರಾಗಿದ್ದು, ಮಸೀದಿಯವರಲ್ಲಿ ಮಗಳ ಮದುವೆಗೆ ಸಹಾಯ ಮಾಡುವಂತೆ ಕೇಳಿದ್ದರು. ಮಸೀದಿಯವರು ನಗದು, ಚಿನ್ನ ಕೊಡುವುದರ ಜೊತೆಗೆ ಮಸೀದಿಯಲ್ಲಿಯೇ ಮದುವೆಯನ್ನು ನೆರೆವೇರಿಸಿಕೊಟ್ಟಿದ್ದರು. ಸುಮಾರು 1 ಸಾವಿರ ಜನರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಮದುವೆ ದೇಶದಾದ್ಯಂತ ಸುದ್ದಿಯಾಗಿತ್ತು.
ಈ ವಿಡಿಯೊವನ್ನು ಕಾಮ್ರೆಡ್ ಫ್ರಮ್ ಕೇರಳ ಹಂಚಿಕೊಂಡಿತ್ತು. ಈ ವಿಡಿಯೊವನ್ನು ಎ.ಆರ್. ರೆಹಮಾನ್ ರಿಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.