ADVERTISEMENT

ಮರಾಠಿ ಭಾಷಿಕರಿರುವ ರಾಜ್ಯದ ಗಡಿ ಪ್ರದೇಶ: ಕೇಂದ್ರಾಡಳಿತದ ಪ್ರಸ್ತಾವವಿಲ್ಲ–ಕೇಂದ್ರ

ಮರಾಠಿ ಭಾಷಿಕರಿರುವ ರಾಜ್ಯದ ಗಡಿ ಪ್ರದೇಶ: ಲೋಕಸಭೆಯಲ್ಲಿ ಕೇಂದ್ರದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 20:24 IST
Last Updated 16 ಮಾರ್ಚ್ 2021, 20:24 IST
ಬೀದರ್–ಸಾಂದರ್ಭಿಕ ಚಿತ್ರ
ಬೀದರ್–ಸಾಂದರ್ಭಿಕ ಚಿತ್ರ   

ನವದೆಹಲಿ: ಮರಾಠಿ ಭಾಷಿಕರು ಅಧಿಕ ಸಂಖ್ಯೆಯಲ್ಲಿರುವ, ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿರುವ ಕರ್ನಾಟಕದ ಯಾವುದೇ ಪ್ರದೇಶವನ್ನು ‘ಕೇಂದ್ರಾಡಳಿತ ಪ್ರದೇಶ’ ಎಂದು ಘೋಷಿಸುವ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಲೋಕಸಭೆಯಲ್ಲಿ ಮಂಗಳವಾರ ಈ ಸಂಬಂಧ ಲಿಖಿತ ಉತ್ತರ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ‘ಈ ಗಡಿ ಪ್ರದೇಶಗಳನ್ನು ‘ಕೇಂದ್ರಾಡಳಿತ ಪ್ರದೇಶ’ವೆಂದು ಘೋಷಿಸುವಂತೆ ಆಗ್ರಹಿಸಿ ಅನೇಕ ಬಾರಿ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರವು ಅವುಗಳನ್ನು ಪರಿಗಣಿಸಿಲ್ಲ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಯವತಮಾಳ–ವಾಶೀಮ್‌ ಕ್ಷೇತ್ರ ಪ್ರತಿನಿಧಿಸುವ ಶಿವಸೇನಾದ ಭಾವನಾ ಪುಂಡಲೀಕರಾವ್ ಗವಳಿ ಅವರ ಪ್ರಶ್ನೆಗೆ ಉತ್ತರ ನೀಡಿದ ರಾಯ್‌ ಅವರು, ‘ಕೆಲವು ವ್ಯಕ್ತಿಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ಈ ಬೇಡಿಕೆಯೊಂದಿಗೆ ಆಯಾ ಕಾಲಘಟ್ಟದಲ್ಲಿ ಮನವಿ ಸಲ್ಲಿಸಿವೆ. ಆದರೆ ಕೇಂದ್ರವು ಅವುಗಳನ್ನು ಮಾನ್ಯ ಮಾಡಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

2011ರ ಜನಗಣತಿ ಪ್ರಕಾರ, ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಮರಾಠಿ ಭಾಷಿಕರ ಸಂಖ್ಯೆಯು 55.98 ಲಕ್ಷದಷ್ಟಿದೆ. ಉಭಯ ರಾಜ್ಯಗಳ ಗಡಿಗೆ ಅಂಟಿಕೊಂಡಿರುವ ದುಧನಿ, ಇಚಲಕರಂಜಿ, ಕಾಗಲ್‌, ಕಮಲನಗರ, ಮೈಂದರ್ಗಿ, ನಿಪ್ಪಾಣಿ, ಸದಲಗಾ, ಸಂಕೇಶ್ವರ ಮತ್ತಿತರ ಕಡೆಗಳಲ್ಲಿ ಮರಾಠಿ ಭಾಷಿಕರಿದ್ದಾರೆ ಎಂದು ಸಚಿವರು ವಿವರ ನೀಡಿದ್ದಾರೆ.

ಶಿವಸೇನಾ ಸದಸ್ಯ ಅರವಿಂದ ಸಾವಂತ್‌ ಅವರು ಸೋಮವಾರವಷ್ಟೇ ಲೋಕಸಭೆಯ ಶೂನ್ಯವೇಳೆಯಲ್ಲಿ ಗಡಿ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ರಾಜ್ಯದ ಬಿಜೆಪಿ ಸಂಸದರು ತೀವ್ರ ಪ್ರತಿಭಟನೆ ನಡೆಸಿದ್ದರು.

ಬೆಳಗಾವಿಯಲ್ಲಿರುವ ಮರಾಠಿಗರ ಮೇಲೆ ಹಲ್ಲೆ ನಡೆಯುತ್ತಿದೆ. ಭಾಷಾವಾರು ಪ್ರಾಂತ್ಯ ರಚನೆ ವೇಳೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ ಮತ್ತು ಬೀದರ್‌ಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಿಲ್ಲ ಎಂದು ಸಾವಂತ್‌ ಆರೋಪಿಸಿದ್ದರು. ಈ ಸಂದರ್ಭ ಪ್ರತಿಭಟನೆ ನಡೆಸಿದ್ದ ಕರ್ನಾಟಕದ ಸಂಸದರು, ಮಹಾಜನ್‌ ಆಯೋಗದ ವರದಿಯನ್ವಯ ಗಡಿ ಸಮಸ್ಯೆ ಇತ್ಯರ್ಥಪಡಿಸಲಾಗಿದೆ ಎಂದಿದ್ದರು.

‘ಮಹಾರಾಷ್ಟ್ರದಲ್ಲಿ ದುರಾಡಳಿತ ನಡೆಸುತ್ತಿರುವ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರ ಜನರ ಗಮನವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಹೊಸ ಆಟ ಶುರು ಮಾಡಿದೆ. ಈಗಾಗಲೇ ಬಗೆಹರಿದಿರುವ ಸಮಸ್ಯೆಯನ್ನು ಕೆದಕುತ್ತ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ್‌ ಉದಾಸಿ ದೂರಿದ್ದರು.

ಕೇಂದ್ರಾಡಳಿತ ಪ್ರದೇಶಕ್ಕೆ ಆಗ್ರಹ:

ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರ ಮೇಲಿನ ಕನ್ನಡಪರ ಸಂಘಟನೆಗಳ ದೌರ್ಜನ್ಯ ನಿಲ್ಲುತಿಲ್ಲ. ಹೀಗಾಗಿ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಶಿವಸೇನಾ ಮಂಗಳವಾರ ಆಗ್ರಹಿಸಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.

ಬೆಳಗಾವಿಯಲ್ಲಿ ಮರಾಠಿ ಮಾತನಾಡುವವರ ಮೇಲೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇತ್ತೀಚೆಗೆ ಹಲ್ಲೆ ನಡೆಸಿದ್ದಾರೆ. ಅಂಗಡಿಗಳಿಗೆ ಅಳವಡಿಸಲಾಗಿದ್ದ ಮರಾಠಿ ಫಲಕಗಳನ್ನು ಕಿತ್ತೆಸೆಯಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿರುವ ಮರಾಠಿಪರ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ಕರ್ನಾಟಕದ ಪೊಲೀಸರೂ ಮರಾಠಿ ಭಾಷಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಸ್ಥಳೀಯರಿಂದಲೂ ದೌರ್ಜನ್ಯ ಮುಂದುವರಿದಿದೆ. ಕರ್ನಾಟಕದ ಆಡಳಿತಾರೂಢ ಬಿಜೆಪಿ ಸರ್ಕಾರ ಇಂಥ ದುಷ್ಕೃತ್ಯಗಳನ್ನು ಬೆಂಬಲಿಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಶಿವಸೇನಾ ಆರೋಪಿಸಿದೆ.

‘ಮಹಾರಾಷ್ಟ್ರದಲ್ಲಿ ವಿವಿಧ ಭಾಷೆ ಮಾತನಾಡುವವರು ಅನೇಕ ದಶಕಗಳಿಂದ ವಾಸಿಸುತ್ತಿದ್ದಾರೆ. ಆದರೆ, ಪರಭಾಷಿಕರೊಂದಿಗೆ ಮರಾಠಿಗರು ಎಂದೂ ಕೆಟ್ಟದಾಗಿ ನಡೆದುಕೊಂಡಿಲ್ಲ. ಇಂದೋರ್‌, ವಡೋದರಾ ನಗರಗಳಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಮರಾಠಿಗರು ಇದ್ದಾರೆ. ಆದರೆ, ಅವರು ಸ್ಥಳೀಯರೊಂದಿಗೆ ಸಂಘರ್ಷ ಎದುರಿಸಿಲ್ಲ’ ಎಂದೂ ಸಂಪಾದಕೀಯದಲ್ಲಿ ವಿವರಿಸಲಾಗಿದೆ.

‘ಈ ವಿಷಯ ಕುರಿತು ಕರ್ನಾಟಕದ ಮುಖ್ಯಮಂತ್ರಿ, ಕೇಂದ್ರದ ಸಚಿವರೊಂದಿಗೆ ಚರ್ಚಿಸಬೇಕು’ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಅವರಿಗೆ ಮನವಿ ಮಾಡಲಾಗಿದೆ.

‘ಹಳದಿ–ಕೆಂಪು ಶಾಲಿನವರನ್ನು ಥಳಿಸುತ್ತೇವೆ’

ಬೆಳಗಾವಿ: ‘ಹಳದಿ, ಕೆಂಪು ಬಣ್ಣದ ಶಾಲು ಹಾಕಿಕೊಂಡು ಓಡಾಡುವವರನ್ನು ಕಂಡ ಕಂಡಲ್ಲಿ ಥಳಿಸುತ್ತೇವೆ’ ಎಂದು
ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಅಧ್ಯಕ್ಷ ಶುಭಂ ಸೆಳಕೆ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗಿದ್ದು ಕನ್ನಡ ಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಗರ ಪೊಲೀಸ್ಆಯುಕ್ತರ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಈಚೆಗೆ ನಡೆದ ಎಂಇಎಸ್ ಕಾರ್ಯಕ್ರಮವೊಂದರಲ್ಲಿ ಸೆಳಕೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

‘ಕನ್ನಡಿಗರನ್ನು ಅವಹೇಳಿಸಿ ಹೇಳಿಕೆ ನೀಡಿರುವ ಹಾಗೂ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮರಾಠಿಗರನ್ನು ಪ್ರಚೋದಿಸಿ ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಹುನ್ನಾರವನ್ನು ತಡೆಯಬೇಕು. ಸೌಹಾರ್ದದಿಂದ ಬದುಕುತ್ತಿರುವ ಜನರ ನಡುವೆ ವಿಷ ಬೀಜ ಬಿತ್ತಿ ಶಾಂತಿ–ಸುವ್ಯವಸ್ಥೆ ಹಾಳು ಮಾಡುವಂತಹ ಹೇಳಿಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರನ್ನು ಗಡಿಪಾರು ಮಾಡಬೇಕು. ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಸಂಘಟನೆಯನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿ ಡಿಸಿಪಿ ವಿಕ್ರಂ ಅಮಟೆ ಅವರಿಗೆ ಮನವಿ ಸಲ್ಲಿಸಿದರು. ಭಾಷಣದ ವಿಡಿಯೊವುಳ್ಳ ಸಿ.ಡಿ. ಪ್ರತಿಯನ್ನೂ ನೀಡಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಲಗಮಪ್ಪ ಗವನ್ನವರ ಪಾಲ್ಗೊಂಡಿದ್ದರು.

‘ಪ್ರಚೋದನಕಾರಿ ಹೇಳಿಕೆ ನೀಡಿರುವ ಶುಭಂ ವಿರುದ್ಧ ಖಡೇಬಜಾರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ವಿಕ್ರಂ ಅಮಟೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.