ನವದೆಹಲಿ: ಕೇಂದ್ರ ಸರ್ಕಾರವು ‘ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ’ಯ ಪರಿಷ್ಕೃತ ಕರಡು ಕುರಿತು ವಿವರಗಳನ್ನು ನೀಡುವುದಕ್ಕೆ ನಿರಾಕರಿಸಿದೆ.
‘ಮಸೂದೆಯ ನಿರ್ದಿಷ್ಟ ಭಾಗಗಳನ್ನು ಅಪ್‌ಡೇಟ್ ಮಾಡಲಾಗಿದೆ ಹಾಗೂ ಅವುಗಳನ್ನು ಕೆಲ ಭಾಗೀದಾರರೊಂದಿಗೆ ಹಂಚಿಕೊಳ್ಳಲಾಗಿದೆ‘ ಎಂದು ಹೇಳಿರುವ ಕೇಂದ್ರ ಸರ್ಕಾರ, ಪರಿಷ್ಕೃತ ಕರಡುವನ್ನು ನೀಡಲು ನಿರಾಕರಿಸಿದೆ.
ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಸಲ್ಲಿಸಲಾದ ಅರ್ಜಿಯೊಂದಕ್ಕೆ ನೀಡಿರುವ ಉತ್ತರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಮಾಹಿತಿ ನೀಡಿದೆ.
ಮಸೂದೆಯ ಎರಡೂ ಆವೃತ್ತಿಗಳ ಸ್ಥಿತಿಗತಿ ಕುರಿತು ಕೂಡ ಸಚಿವಾಲಯ ಮಾಹಿತಿ ನೀಡಿಲ್ಲ. ಈ ಪೈಕಿ ಒಂದು ಆವೃತ್ತಿಯನ್ನು ಸಾರ್ವಜನಿಕ ವಲಯದಿಂದ ದೂರವೇ ಇಟ್ಟಿರುವುದು ಗಮನಾರ್ಹ.
ಪ್ರಚಲಿತ ವಿದ್ಯಮಾನಗಳ ಕುರಿತು ಆನ್‌ಲೈನ್ ವೇದಿಕೆಗಳಿಗೆ ವಿಷಯವಸ್ತು ಸಿದ್ಧಪಡಿಸುವವರನ್ನು ‘ಒಟಿಟಿ’ ಅಥವಾ ‘ಡಿಜಿಟಲ್ ಬ್ರಾಡ್‌ಕಾಸ್ಟರ್’ ಎಂಬುದಾಗಿ ಪರಿಗಣಿಸುವ ಪ್ರಸ್ತಾವವನ್ನು ಪರಿಷ್ಕೃತ ಕರಡು ಒಳಗೊಂಡಿತ್ತು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಕಾರಣ, ಕಳೆದ ವರ್ಷ ಆಗಸ್ಟ್‌ನಲ್ಲಿ ಈ ವಿಚಾರ ಕುರಿತು ಸಾರ್ವಜನಿಕರಿಂದ ಸಲಹೆ–ಸೂಚನೆಗಳನ್ನು ಸಚಿವಾಲಯ ಆಹ್ವಾನಿಸಿತ್ತು.
ಅಕ್ಟೋಬರ್ 15ರ ವರೆಗೆ ಸಲಹೆ–ಸೂಚನೆ ನೀಡಲು ಅವಕಾಶ ನೀಡಿದ್ದ ಸಚಿವಾಲಯ, ಭಾಗೀದಾರರೊಂದಿಗೆ ವ್ಯಾಪಕ ಸಮಾಲೋಚನೆ ಬಳಿಕ ಹೊಸದಾಗಿ ಕರಡು ಪ್ರಕಟಿಸುವುದಾಗಿ ಹೇಳಿತ್ತು.
‘ಮಸೂದೆಯ ಒಂದು ಆವೃತ್ತಿಯನ್ನು ಆಯ್ದ ಭಾಗೀದಾರರೊಂದಿಗೆ ಹಂಚಿಕೊಳ್ಳಲಾಗಿದೆ. ಇದು, ಸಮಾಲೋಚನೆ ಪ್ರಕ್ರಿಯೆ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. ಮಸೂದೆಯು ವ್ಯಾಪಕ ಪರಿಣಾಮ ಬೀರುವುದರಿಂದ, ಸಮಾಲೋಚನೆ ಮತ್ತು ಪರಿಷ್ಕರಣೆ ಪ್ರಕ್ರಿಯೆ ಕುರಿತು ಗೋಪ್ಯತೆ ಕಾಯ್ದುಕೊಳ್ಳುವುದು ಅಪಾಯಕಾರಿ‘ ಎಂದು ಮಾಹಿತಿ ಹಕ್ಕು ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.