ADVERTISEMENT

ಸಂವಿಧಾನ, ಪ್ರಧಾನಿ, ರಾಷ್ಟ್ರಪತಿ ಸ್ಥಾನಗಳೂ ಜಾತ್ಯತೀತ: ಶಿವಸೇನೆ ಸಂಸದ ರಾವುತ್‌

ಏಜೆನ್ಸೀಸ್
Published 15 ಅಕ್ಟೋಬರ್ 2020, 9:25 IST
Last Updated 15 ಅಕ್ಟೋಬರ್ 2020, 9:25 IST
ಶಿವಸೇನೆ ಸಂಸದ ಸಂಜಯ್‌ ರಾವುತ್‌
ಶಿವಸೇನೆ ಸಂಸದ ಸಂಜಯ್‌ ರಾವುತ್‌    

ಮುಂಬೈ: ದೇಶದ ಸಂವಿಧಾನದ ಸ್ವರೂಪ, ಪ್ರಧಾನಿ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳು ಜಾತ್ಯತೀತವಾಗಿದೆ ಎಂದು ಶಿವಸೇನೆ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ದೇಗುಲಗಳನ್ನು ಮರಳಿ ತೆರೆಯುವ ವಿಚಾರವಾಗಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ನೇತೃತ್ವದ ಸರ್ಕಾರ ಮತ್ತು ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರ ನಡುವೆ ‘ಜಾತ್ಯತೀತ‌’ದ ವಿಷಯವಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ.

ಹೀಗಿರುವಾಗಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯಸಭೆ ಸದಸ್ಯ ಸಂಜಯ್‌ ರಾವುತ್‌, ‘ದೇಶದ ಸಂವಿಧಾನದ ಸ್ವರೂಪ, ಪ್ರಧಾನಿ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳು ಜಾತ್ಯತೀತವಾಗಿವೆ. ಹಿಂದುತ್ವವು ನಮ್ಮ ಹೃದಯದಲ್ಲಿದೆ ಮತ್ತು ನಮ್ಮ ಆಚರಣೆಯಲ್ಲಿದೆ. ಆದರೆ ದೇಶವು ಜಾತ್ಯತೀತ ಸ್ವರೂಪದಲ್ಲಿರುವ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

ಮುಂದುವರಿದು, ‘ಒಂದು ವೇಳೆ ಮಹಾರಾಷ್ಟ್ರ ರಾಜ್ಯಪಾಲರು ಸಿಎಂ ಠಾಕ್ರೆ ಅವರ ಜಾತ್ಯತೀತದ ಬಗ್ಗೆ ಪ್ರಶ್ನೆಗಳನ್ನು ಎತ್ತುವುದೇ ಆದರೆ, ರಾಷ್ಟ್ರಪತಿ ಮತ್ತು ಪ್ರಧಾನಿ ರಾಜ್ಯಪಾಲರು ಜಾತ್ಯತೀತರಾಗಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಅವರನ್ನು ಪ್ರಶ್ನೆ ಮಾಡಬೇಕು. ದೇವಾಲಯಗಳನ್ನು ಮುಚ್ಚಲು ಯಾರೂ ಬಯಸುವುದಿಲ್ಲ. ಆದರೆ ನಾವು ಜನರ ಜೀವವನ್ನು ಉಳಿಸಬೇಕಾಗಿದೆ,’ ರಾವುತ್‌ ಹೇಳಿದ್ದಾರೆ.

ಈ ಮಧ್ಯೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರನ್ನು ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿದೆ.

ಸಂಘ ಸಂಸ್ಥೆಗಳ ಮನವಿಯ ನಂತರವೂ ದೇವಾಲಯಗಳನ್ನು ತೆರೆಯದ ಸರ್ಕಾರದ ನಿಲುವಿನ ಕುರಿತು ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ ರಾಜ್ಯಪಾಲ ಕೋಶಿಯಾರಿ, ‘ನೀವು ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದೀರಿ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಯೋಧ್ಯೆಗೆ ಭೇಟಿ ನೀಡುವ ಮೂಲಕ ಭಗವಾನ್ ರಾಮನ ಕುರಿತಾದ ನಿಮ್ಮ ಭಕ್ತಿಯನ್ನು ಸಾರ್ವಜನಿಕವಾಗಿ ತಿಳಿಯಪಡಿಸಿದ್ದೀರಿ. ಆಷಾಢ ಏಕಾದಶಿಯಂದು ಫಂಡರಾಪುರದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೀರಿ. ಪೂಜಾ ಸ್ಥಳಗಳ ಪುನರಾರಂಭ ಮುಂದೂಡಲು ನೀವು ಯಾವುದಾದರೂ ದೈವೀಕ ಮುನ್ಸೂಚನೆಯನ್ನು ಪಡೆಯುತ್ತಿದ್ದೀರಾ ಅಥವಾ ದಿಢೀರಾಗಿ, ಹಿಂದೆ ನೀವು ದ್ವೇಷಿಸುತ್ತಿದ್ದ ಜಾತ್ಯತೀತರಾದಿರಾ ಎಂಬುದಾಗಿ ಅಚ್ಚರಿಯಾಗಿದೆ' ಎಂದು ಹೇಳಿದ್ದರು.

ತಕ್ಷಣವೇ ಇದಕ್ಕೆ ಪ್ರತಿಯಾಗಿ ಪತ್ರ ಬರೆದ ಉದ್ದವ್, ‘ನೀವು ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದೀರಿ. ಜಾತ್ಯತೀತತೆಯು ಸಂವಿಧಾನದ ಅಂಗ’ ಎಂದು ಉತ್ತರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.