ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ನಿಖರ ಭವಿಷ್ಯ ಹೇಳಿದ್ದ 'ಇಂಡಿಯಾ ಟುಡೆ-ಆಕ್ಸಿಸ್-ಮೈ-ಇಂಡಿಯಾ' ವಿಶ್ವಾಸಾರ್ಹತೆ ಕಾಪಾಡಿಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಸತತ ಏಳನೇ ಬಾರಿಗೆ ಅಧಿಕಾರ ಹಿಡಿಯಲಿದೆ, ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ನಿಕಟ ಪೈಪೋಟಿ ನಡೆಸುವ ಬಿಜೆಪಿ ಸೋಲು ಕಾಣಲಿದೆ ಎಂದು ‘ಇಂಡಿಯಾ ಟುಡೇ-ಆಕ್ಸಿಸ್-ಮೈ-ಇಂಡಿಯಾ’ ತನ್ನ ಸಮೀಕ್ಷೆಯಲ್ಲಿ ತಿಳಿಸಿತ್ತು.
‘ಇಂಡಿಯಾ ಟುಡೇ-ಆಕ್ಸಿಸ್-ಮೈ-ಇಂಡಿಯಾ’ ಸಮೀಕ್ಷೆ ದೋಷರಹಿತವಾಗಿವೆ ಎಂಬುದನ್ನು ಎರಡು ರಾಜ್ಯಗಳ ಅಧಿಕೃತ ಫಲಿತಾಂಶಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಇತ್ತೀಚಿನ ಚುನಾವಣೆಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆಗಳು ನುಡಿದಿರುವ ಭವಿಷ್ಯವಾಣಿ ಶೇ. 95ರಷ್ಟು ನಿಖರತೆ ಕಾಯ್ದು ಕೊಂಡಿವೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 129 ರಿಂದ 151 ಸ್ಥಾನಗಳನ್ನು, ಪ್ರತಿಪಕ್ಷ ಕಾಂಗ್ರೆಸ್ 16 ರಿಂದ 30 ಸ್ಥಾನಗಳನ್ನು, ಅರವಿಂದ್ ಕೇಜ್ರಿವಾಲ್ ಅವರ ಎಎಪಿ 9-21 ಸ್ಥಾನಗಳನ್ನು ಗಳಿಸಲಿದೆ ಎಂದು ‘ಇಂಡಿಯಾ ಟುಡೇ-ಆಕ್ಸಿಸ್-ಮೈ-ಇಂಡಿಯಾ’ ಅಂದಾಜಿಸಿತ್ತು.
ಅಧಿಕೃತ ಫಲಿತಾಂಶ ಹೊರ ಬಿದ್ದಾಗ ಗುಜರಾತ್‌ನಲ್ಲಿ ಬಿಜೆಪಿ ಪ್ರಚಂಡ ಜಯ ದಾಖಲಿಸಿತ್ತು, ಕಾಂಗ್ರೆಸ್‌ಗೆ ಭಾರಿ ಆಘಾತವಾಗಿತ್ತು. ಎಎಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 30 ರಿಂದ 40 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಅದು ನಿಜವಾಗಿದೆ. ಬಿಜೆಪಿಯು 24 ರಿಂದ 34 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿತ್ತು.
ಇದನ್ನೂ ಓದಿ:ಯಾವ ಸಮೀಕ್ಷೆ ಏನು ಹೇಳಿತ್ತು? ಇಲ್ಲಿದೆ ವಿವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.