ADVERTISEMENT

ಇನ್ನು ಜನನ ಪ್ರಮಾಣಪತ್ರವೇ ಎಲ್ಲಕ್ಕೂ‌ ಆಧಾರ: ಮಸೂದೆ ಮಂಡನೆ

ಜನನ ಪ್ರಮಾಣಪತ್ರವೇ ಎಲ್ಲಕ್ಕೂ ಆಧಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 15:55 IST
Last Updated 26 ಜುಲೈ 2023, 15:55 IST
   

ನವದೆಹಲಿ: ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ–1969ಕ್ಕೆ ತಿದ್ದುಪಡಿ ತರುವ ಉದ್ದೇಶದ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಬುಧವಾರ ಮಂಡಿಸಿದೆ.

ಈ ಕಾಯ್ದೆ ಜಾರಿಗೆ ಬಂದು 54 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡುತ್ತಿರುವುದು ಗಮನಾರ್ಹ.

ಶಾಲಾ–ಕಾಲೇಜುಗಳಲ್ಲಿ ಪ್ರವೇಶ, ಚಾಲನಾ ಪರವಾನಗಿ ಪಡೆಯಲು ಹಾಗೂ ಸರ್ಕಾರಿ ನೌಕರಿಗೆ ನಡೆಯುವ ನೇಮಕಾತಿ ಸಂದರ್ಭಗಳಲ್ಲಿ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಂತೆ ಬಳಸಲು ಉದ್ದೇಶಿತ ತಿದ್ದುಪಡಿಗಳು ಅವಕಾಶ ಕಲ್ಪಿಸುತ್ತವೆ.

ADVERTISEMENT

ಮತದಾರರ ಪಟ್ಟಿ ಸಿದ್ಧಪಡಿಸಲು, ಆಧಾರ್‌ ಸಂಖ್ಯೆ ನೀಡುವಾಗ ಹಾಗೂ ವಿವಾಹ ನೋಂದಣಿ ಸಂದರ್ಭದಲ್ಲಿಯೂ ಜನನ ಪ್ರಮಾಣಪತ್ರವನ್ನು ಬಳಸಲು ಈ ಉದ್ದೇಶಿತ ತಿದ್ದುಪಡಿಗಳಿಂದ ಸಾಧ್ಯವಾಗಲಿದೆ.

ಈ ಉದ್ದೇಶಗಳಿಗೆ ಜನನ ಪ್ರಮಾಣಪತ್ರ ಬಳಸಬೇಕು ಎಂಬ ಸರ್ಕಾರದ ಯೋಜನೆಗೆ ಈ ಹಿಂದೆ ಭಾರಿ ವಿರೋಧ ವ್ಯಕ್ತವಾಗಿತ್ತು. ಖಾಸಗಿತನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಹಲವರು ಈ ನಡೆಯು ರಾಜ್ಯಗಳ ಹಕ್ಕುಗಳನ್ನು ಕಸಿಯಲಿದೆ ಎಂದು ದೂರಿದ್ದರು.  ಜನರಿಗೆ ಸಂಬಂಧಿಸಿದ ಮಾಹಿತಿಯನ್ನು ಸರ್ಕಾರವು ಅನಿಯಂತ್ರಿತವಾಗಿ ಪಡೆಯುವುದು ಸಾಧ್ಯವಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು.

ಮಸೂದೆ ಮಂಡಿಸಿ ಮಾತನಾಡಿದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್, ‘ಸಾಮಾಜಿಕ ಬದಲಾವಣೆ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಗೆ ತಕ್ಕಂತೆ ಈ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಹೇಳಿದರು.

‘ತಿದ್ದುಪಡಿ ಮೂಲಕ ಕಾಯ್ದೆಯನ್ನು ಮತ್ತಷ್ಟು ನಾಗರಿಕಸ್ನೇಹಿಯಾಗಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳು, ಸಾರ್ವಜನಿಕರು ಹಾಗೂ ಇತರ ಭಾಗೀದಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ’ ಎಂದು ಸಚಿವ ರಾಯ್‌ ಸದನಕ್ಕೆ ವಿವರಿಸಿದರು.

ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಸಂಸದ ಮನೀಷ್‌ ತಿವಾರಿ, ‘ಈ ಮಸೂದೆಯು ವ್ಯಕ್ತಿಯ ಖಾಸಗಿತನ ಹಕ್ಕು, ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ವಿಂಗಡಣೆಯ ಉಲ್ಲಂಘನೆಯಾಗಲಿದೆ’ ಎಂದು ಹೇಳಿದರು.

ತಿದ್ದುಪಡಿ ಮಸೂದೆಯಲ್ಲಿನ ಪ್ರಮಖ ಅಂಶಗಳು

* ಜನನ ಪ್ರಮಾಣಪತ್ರವನ್ನು ಜನಿಸಿದ ದಿನಾಂಕ ಮತ್ತು ಸ್ಥಳದ ಪುರಾವೆಯ ದಾಖಲೆಯಂತೆ ಬಳಸಬಹುದು

* ಜನಸಂಖ್ಯಾ ರಿಜಿಸ್ಟ್ರಾರ್, ಮತದಾರರ ಪಟ್ಟಿ, ಆಧಾರ್‌ ಸಂಖ್ಯೆ, ಪಡಿತರ ಚೀಟಿ, ಪಾಸ್‌ಪೋರ್ಟ್‌, ಆಸ್ತಿ ನೋಂದಣಿ ಹಾಗೂ ಕೇಂದ್ರ ಸರ್ಕಾರದಿಂದ ಅಧಿಸೂಚಿತ ಇತರ ಡೇಟಾಬೇಸ್‌ಗಳನ್ನು ನಿರ್ವಹಿಸುವ ಪ್ರಾಧಿಕಾರಗಳಿಗೆ ಜನನ ಮತ್ತು ಮರಣಗಳ ಡೇಟಾಬೇಸ್‌ ಒದಗಿಸುವುದು

* ದತ್ತು ಪಡೆದ ಮಗು, ಅನಾಥ, ಪರಿತ್ಯಕ್ತ, ಬಾಡಿಗೆ ತಾಯ್ತನದಿಂದ ಪಡೆದ ಮಗು, ಒಬ್ಬರೇ ಪಾಲಕರಿರುವ ಅಥವಾ ಅವಿವಾಹಿತ ತಾಯಿಯ ಮಗುವಿನ ನೋಂದಣಿಗೆ ತಿದ್ದುಪಡಿ ನೆರವಾಗಲಿದೆ

* ವಿಪತ್ತು ಅಥವಾ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಮರಣಗಳ ನೋಂದಣಿ ಹಾಗೂ ಮರಣ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆಗೆ ವೇಗ ನೀಡುವುದಕ್ಕಾಗಿ ವಿಶೇಷ ಸಬ್‌ರಿಜಿಸ್ಟ್ರಾರ್‌ಗಳ ನೇಮಕಕ್ಕೆ ಅವಕಾಶ

* ಜನನ ನೋಂದಣಿ ಸಂದರ್ಭದಲ್ಲಿ ಪಾಲಕರ ಅಥವಾ ಮಾಹಿತಿ ನೀಡುವವರ ಆಧಾರ್‌ ಸಂಖ್ಯೆಯನ್ನು ಸಂಗ್ರಹಿಸಲು ಅವಕಾಶ

* ರಿಜಿಸ್ಟ್ರಾರ್‌ ಅಥವಾ ಜಿಲ್ಲಾ ರಿಜಿಸ್ಟ್ರಾರ್‌ಗಳು ತೆಗೆದುಕೊಂಡ ಕ್ರಮ ಇಲ್ಲವೇ ಹೊರಡಿಸಿದ ಆದೇಶದಿಂದ ತೊಂದರೆಗೆ ಒಳಗಾಗುವ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಒದಗಿಸಲು ಮತ್ತು ದಂಡದ ಮೊತ್ತವನ್ನು ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.