ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಪರಸ್ಪರ ಪರೋಕ್ಷವಾಗಿ ಟೀಕಾಪ್ರಹಾರ ಮಾಡಲು ಮಂಗಳವಾರ ವರ್ಚುವಲ್ ವಿಧಾನದ ಮೂಲಕ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆ ಸಾಕ್ಷಿಯಾಯಿತು.
ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ‘ಕೆಲ ರಾಷ್ಟ್ರಗಳು ಭಯೋತ್ಪಾದನೆಯನ್ನೇ ತಮ್ಮ ನೀತಿಯಾಗಿಸಿಕೊಂಡಿವೆ. ಇಂಥ ನಡೆಯನ್ನು ಸಂಘಟನೆಯ ಸದಸ್ಯ ರಾಷ್ಟ್ರಗಳು ಖಂಡಿಸಬೇಕು’ ಎಂದು ಹೇಳಿದರು.
‘ಉಗ್ರವಾದವು ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿಗೆ ಒಡ್ಡಿರುವ ದೊಡ್ಡ ಬೆದರಿಕೆ. ಹೀಗಾಗಿ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ದ್ವಂದ್ವ ನಿಲುವುಗಳು ಇರಬಾರದು. ಭಯೋತ್ಪಾದನೆ ಯಾವುದೇ ಸ್ವರೂಪದ್ದಾಗಿದ್ದರೂ ಅದರ ವಿರುದ್ಧ ಒಟ್ಟಾಗಿ ಹೋರಾಡಬೇಕು’ ಎನ್ನುವ ಮೂಲಕ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಚಾಟಿ ಬೀಸಿದರು.
‘ಯುವಕರು ಮೂಲಭೂತವಾದದತ್ತ ಆಕರ್ಷಿತರಾಗುವುದನ್ನು ತಪ್ಪಿಸಲು ಎಲ್ಲ ಸದಸ್ಯ ರಾಷ್ಟ್ರಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ’ ಎಂದು ಮೋದಿ ಪ್ರತಿಪಾದಿಸಿದರು.
‘ಸದಸ್ಯ ರಾಷ್ಟ್ರಗಳ ನಡುವೆ ಉತ್ತಮ ಸಂಪರ್ಕ ಅಗತ್ಯವಿದೆ. ಆದರೆ, ಪ್ರತಿಯೊಂದು ರಾಷ್ಟ್ರದ ಸಾರ್ವಭೌಮತೆಯನ್ನು ಗೌರವಿಸುವುದು ಅಷ್ಟೇ ಮುಖ್ಯ’ ಎಂದೂ ಹೇಳಿದರು.
ಶೆಹಬಾಜ್ ಷರೀಫ್ ಮಾತನಾಡಿ, ‘ರಾಜತಾಂತ್ರಿಕ ವಿಚಾರವಾಗಿ ಲಾಭ ಪಡೆಯುವ ಸಲುವಾಗಿ ಭಯೋತ್ಪಾದನೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು.
‘ತಮ್ಮ ಆಂತರಿಕ ರಾಜಕೀಯ ಕಾರ್ಯಸೂಚಿಯನ್ನು ಜಾರಿಗೊಳಿಸುವ ಸಲುವಾಗಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಕ್ರೂರವಾಗಿ ನಡೆಸಿಕೊಳ್ಳಬಾರದು’ ಎಂದೂ ಹೇಳಿದರು.
ಘೋಷಣೆ: ‘ಭಯೋತ್ಪಾದನೆಯನ್ನು ನಿಗ್ರಹಿಸಲು ಸಂಘಟನೆಯ ಎಲ್ಲ ನಾಯಕರು ಶಪಥ ಮಾಡಿದರು’ ಎಂದು ಶೃಂಗಸಭೆ ಕೊನೆಗೊಂಡ ನಂತರ ಬಿಡುಗಡೆ ಮಾಡಿದ ಘೋಷಣೆಯಲ್ಲಿ ತಿಳಿಸಲಾಗಿದೆ.
‘ಉಗ್ರರಿಗೆ ಹಣಕಾಸು ನೆರವು ನೀಡುವ ಮಾರ್ಗಗಳಿಗೆ ಕಡಿವಾಣ ಹಾಕಬೇಕು, ಉಗ್ರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹತ್ತಿಕ್ಕಬೇಕು ಹಾಗೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ತಡೆಯಬೇಕು’ ಎಂಬ ನಿರ್ಣಯಗಳನ್ನು ಸಹ ಸದಸ್ಯ ರಾಷ್ಟ್ರಗಳ ನಾಯಕರು ಕೈಗೊಂಡರು ಎಂದೂ ಘೋಷಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.