ನವದೆಹಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಲ್ಲಿನ ಒಳಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯಗಳು ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಒಂದೇ ವರ್ಗ ಎಂಬ ಕಾರಣಕ್ಕೆ ಹಣ್ಣುಗಳ ಇಡೀ ಬುಟ್ಟಿಯನ್ನು ಬಲಶಾಲಿ ಜಾತಿಗೆ ಮಾತ್ರ ನೀಡಲಾಗದು. ಇದರಿಂದ ಇತರ ಜಾತಿಗಳಿಗೆ ಅನ್ಯಾಯ ಆಗುತ್ತದೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಅಭಿಪ್ರಾಯಪಟ್ಟಿದೆ.
ಸಮಾನತೆ ತರುವುದಕ್ಕಾಗಿ ಎಲ್ಲರಿಗೂ ಮೀಸಲಾತಿ ನೀಡಲು ಒಳ ವರ್ಗೀಕರಣಗಳನ್ನು ಮಾಡಲು ಅವಕಾಶ ಇದೆ. ಒಳಮೀಸಲಾತಿ ನೀಡದೇ ಇದ್ದರೆ ಅಸಮಾನರನ್ನು ಸಮಾನರು ಎಂದು ಪರಿಗಣಿಸಿದಂತಾಗುತ್ತದೆ. ಅವರ ಸಮಾನತೆಯ ಹಕ್ಕನ್ನೇ ಕಸಿದಂತಾಗುತ್ತದೆ ಎಂದು ಪೀಠವು ಹೇಳಿದೆ.
ಒಳಮೀಸಲಾತಿ ನೀಡುವುದು ಎಂದರೆ,‘ಯಾವುದೇ ಜಾತಿಯನ್ನು ಹೊರಗೆ ಇರಿಸಿದಂತೆ ಅಲ್ಲ. ಏಕೆಂದರೆ, ಯಾವ ಜಾತಿಗೂ ಮೀಸಲಾತಿ ನಿರಾಕರಣೆ ಆಗುವುದಿಲ್ಲ’.ಸಾಕಷ್ಟು ಪ್ರಾತಿನಿಧ್ಯ ಇರುವ, ಮುಂದುವರಿದ, ಕೆನೆಪದರಕ್ಕೆ ಸೇರಿದ ಕೆಲವೇ ಜಾತಿಗಳು ಮೀಸಲಾತಿಯ ಪ್ರಯೋಜನವನ್ನು ತಮ್ಮ ಮುಷ್ಟಿಯೊಳಗೆ ಇರಿಸಿಕೊಂಡರೆ ಅದು ಮೀಸಲಾತಿಯ ಉದ್ದೇಶಕ್ಕೆ ತದ್ವಿರುದ್ಧವಾಗುತ್ತದೆ. ಹಸಿವು ಇರುವ ಪ್ರತಿ ವ್ಯಕ್ತಿಗೂ ಆಹಾರ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್ ಶರಣ್, ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.
ಸಿಖ್ ಸಮುದಾಯಕ್ಕೆ ಇರುವ ಮೀಸಲಾತಿಯಲ್ಲಿ ಬಾಲ್ಮಿಕಿ ಮತ್ತು ಮಝ್ಬಿ ಸಿಖ್ಖರಿಗೆ ಆದ್ಯತೆ ನೀಡಬೇಕು ಎಂದು ಪಂಜಾಬ್ ಸರ್ಕಾರ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮೂವರು ನ್ಯಾಯಮೂರ್ತಿಗಳ ಪೀಠವು ವಿಚಾರಣೆ ನಡೆಸಿತ್ತು. ಬಳಿಕ ಅದನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರಕರಣದ ತೀರ್ಪು ನೀಡಿದ ಪೀಠವು, ಒಳಮೀಸಲಾತಿಗೆ ಅವಕಾಶ ಇದೆ ಎಂದು ತೀರ್ಪು ಕೊಟ್ಟಿದೆ. ಒಳಮೀಸಲಾತಿ ನೀಡುವುದರಿಂದ, ಸಂವಿಧಾನದ 341 ಅಥವಾ 342ನೇ ವಿಧಿಯಲ್ಲಿನ ಪಟ್ಟಿಯನ್ನು ಯಾವುದೇ ರೀತಿಯಲ್ಲಿಯೂ ತಿರುಚಿದಂತೆ ಆಗುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.
ಹಿಂದಿನ ತೀರ್ಪು
* ಹಿಂದುಳಿದ ವರ್ಗಗಳಲ್ಲಿ ಒಳಮೀಸಲಾತಿಗಾಗಿ ಉಪವರ್ಗೀಕರಣಕ್ಕೆ ಅವಕಾಶ ಇದೆ ಎಂದು ಇಂದಿರಾ ಸಾಹ್ನಿ (ಮಂಡಲ್ ಆಯೋಗ) ಪ್ರಕರಣದಲ್ಲಿ 1992ರಲ್ಲಿ ತೀರ್ಪು ನೀಡಲಾಗಿತ್ತು
* ಮೀಸಲಾತಿಯ ಫಲ ಪಡೆದವರನ್ನು ಹೊರಗೆ ಇರಿಸುವುದಕ್ಕಾಗಿ ‘ಕೆನೆ ಪದರ ಪರಿಕಲ್ಪನೆ’ಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೂ ಅನ್ವಯ ಮಾಡಬಹುದು ಎಂದು ಜರ್ನೈಲ್ ಸಿಂಗ್ ಪ್ರಕರಣದಲ್ಲಿ 2018ರಲ್ಲಿ ತೀರ್ಪು ಕೊಡಲಾಗಿತ್ತು
ಎದ್ದು ಕಾಣುವ ಅಸಮಾನತೆ
‘ಪರಂಪರಾಗತವಾಗಿ ಉತ್ತಮ ಕೆಲಸ ಮಾಡುತ್ತಿದ್ದ ಕೆಲವು ಗುಂಪುಗಳುಸರ್ಕಾರಿ ಕೆಲಸ ಮತ್ತು ಶಿಕ್ಷಣದಲ್ಲಿನ ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ. ಇದು ಜಾತಿ ಸಂಘರ್ಷ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಬಾಲ್ಮಿಕಿಗಳು (ಪಂಜಾಬ್‌ನಲ್ಲಿ) ಎಂದು ಕರೆಯಲಾಗುವ ಸಫಾಯಿ ಕರ್ಮಚಾರಿ ಸಮುದಾಯವು ಹಿಂದೆ ಎಲ್ಲಿತ್ತೋ ಈಗಲೂ ಅಲ್ಲಿಯೇ ಇದೆ. ಪರಿಶಿಷ್ಟ ಜಾತಿಯೊಳಗಿನ ಅಸಮಾನತೆ ಬಹಳ ದೊಡ್ಡದಾಗಿದೆ ಎಂಬುದನ್ನು ವಿವಿಧ ವರದಿಗಳು ಹೇಳಿವೆ’ ಎಂದು ಪೀಠವು ತಿಳಿಸಿದೆ.
ಮರುಪರಿಶೀಲನೆಗೆ ವಿಸ್ತೃತ ಪೀಠ
ಇ.ವಿ. ಚೆನ್ನಯ್ಯ ಮತ್ತು ಆಂಧ್ರ ಪ್ರದೇಶ ಸರ್ಕಾರ ಪ್ರಕರಣದಲ್ಲಿ 2005ರಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು ನೀಡಿದ್ದ ತೀರ್ಪಿಗೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಗುರುವಾರ ವ್ಯಕ್ತಪಡಿಸಿದೆ. ಒಳಮೀಸಲಾತಿ ನೀಡುವುದಕ್ಕಾಗಿ ಉಪವರ್ಗೀಕರಣವು ಸಂವಿಧಾನದ 341, 342 ಮತ್ತು 342 (ಎ) ವಿಧಿಗಳಲ್ಲಿ ಸೂಚಿಸಿರುವ ಪಟ್ಟಿಯನ್ನು ತಿರುಚಿದಂತಾಗುತ್ತದೆ ಎಂದು 2005ರಲ್ಲಿ ತೀರ್ಪು ನೀಡಲಾಗಿತ್ತು.
ಇ.ವಿ.ಚೆನ್ನಯ್ಯ ಪ್ರಕರಣದ ತೀರ್ಪನ್ನು ಮರುಪರಿಶೀಲಿಸಬೇಕಾದ ಅಗತ್ಯ ಇದೆ ಎಂದು ಪೀಠವು ಹೇಳಿದೆ. ಇದಕ್ಕಾಗಿ ಏಳು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಮೂರ್ತಿಗಳಿರುವ ಪೀಠವನ್ನು ರಚಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಯನ್ನು ಕೋರಲಾಗಿದೆ.
ಕೆನೆಪದರ ಚರ್ಚೆ
ಸುಪ್ರೀಂ ಕೋರ್ಟ್‌ನ ಅಭಿಮತವು ಮೀಸಲಾತಿಗೆ ಸಂಬಂಧಿಸಿ ಬಹುದೊಡ್ಡ ಚರ್ಚೆಗೆ ಕಾರಣವಾಗಬಹುದು. ಸುಪ್ರೀಂ ಕೋರ್ಟ್ ಈಗ ಪ್ರಕಟಿಸಿರುವ ಅಭಿಮತದಿಂದಾಗಿ ಒಳಮೀಸಲು ಜಾರಿಗೆ ಬರಬಹುದು. ಎಸ್‌ಸಿ, ಎಸ್‌ಟಿ ಸಮುದಾಯಗಳಲ್ಲಿ ಕೆನೆಪದರ ನೀತಿ ಅನ್ವಯಕ್ಕೆ ಇದು ಅವಕಾಶ ನೀಡಲಿದೆ.
ಸುಪ್ರೀಂ ಕೋರ್ಟ್‌ನ ಅಭಿಮತವು ಮೀಸಲಾತಿಗೆ ಸಂಬಂಧಿಸಿ ಬಹುದೊಡ್ಡ ಚರ್ಚೆಗೆ ಕಾರಣವಾಗಬಹುದು. ಸುಪ್ರೀಂ ಕೋರ್ಟ್ ಈಗ ಪ್ರಕಟಿಸಿರುವ ಅಭಿಮತದಿಂದಾಗಿ ಒಳಮೀಸಲು ಜಾರಿಗೆ ಬರಬಹುದು. ಎಸ್‌ಸಿ, ಎಸ್‌ಟಿ ಸಮುದಾಯಗಳಲ್ಲಿ ಕೆನೆಪದರ ನೀತಿ ಅನ್ವಯಕ್ಕೆ ಇದು ಅವಕಾಶ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.