ADVERTISEMENT

ಕ್ರೀಡಾ ಕ್ಷೇತ್ರದ ಮೇಲೆ ಗಾಢ ಪ್ರಭಾವ ಬೀರಿದ ದಿಗ್ಗಜ ರತನ್ ಟಾಟಾ

ಪಿಟಿಐ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
<div class="paragraphs"><p>ರತನ್ ಟಾಟಾ&nbsp;</p></div>

ರತನ್ ಟಾಟಾ 

   

ಮುಂಬೈ: ಭಾರತದ ಕ್ರೀಡಾ ಕ್ಷೇತ್ರದ ಮೇಲೆ ಟಾಟಾ ಗುಂಪು ಬೀರಿರುವ ಪ್ರಭಾವ ಗಾಢವಾದುದು. ಸರ್‌ ದೊರಬ್ಜಿ ಟಾಟಾ ಅವರ ಕಾಲದಿಂದ ಆರಂಭವಾದ ಕ್ರೀಡೆಯನ್ನು ಪ್ರೋತ್ಸಾಹಿಸುವ ಪರಂಪರೆ ರತನ್‌ ಟಾಟಾ ಕಾಲದಲ್ಲಿ ಎಗ್ಗಿಲ್ಲದೇ ಮುಂದುವರಿಯಿತು.

ಸರ್‌ ದೊರಬ್ಜಿ ಟಾಟಾ 1920ರ ಆ್ಯಂಟವರ್ಪ್ ಒಲಿಂಪಿಕ್ಸ್‌ ವೇಳೆಯಲ್ಲೇ ಭಾರತದ ಕೆಲವು ಅಥ್ಲೀಟುಗಳ ಪ್ರಾಯೋಜತಕತ್ವ ವಹಿಸಿಕೊಂಡಿದ್ದರು. ದೊರಬ್ಜಿ ಅವರು 1924ರಲ್ಲಿ ಭಾರತ ಒಲಿಂಪಿಕ್‌ ಸಂಸ್ಥೆಯ ಮೊದಲ ಅಧ್ಯಕ್ಷರಾಗಿದ್ದರು. ಈ ಪರಂಪರೆ ಅನೂಚಾನವಾಗಿ ಬೆಳೆದುಬಂತು. ಬುಧವಾರ ನಿಧನರಾದ ರತನ್ ಟಾಟಾ ಅವರು ಕ್ರೀಡೆಯನ್ನು ‘ಜೀವನ ಮಾರ್ಗ’ ಎಂದೇ  ಪರಿಗಣಿಸಿದ್ದರು.

ADVERTISEMENT

ಜನಪ್ರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಪ್ರಧಾನ ಪ್ರಾಯೋಜಕತ್ವ ವಹಿಸಿದ್ದರಿಂದ ಹಿಡಿದು, ಅಷ್ಟೇನೂ ಜನಪ್ರಿಯತೆ ಪಡೆದಿಲ್ಲದ ಆರ್ಚರಿಗೂ ರತನ್ ಟಾಟಾ ಅವರ ಕಾಲದಲ್ಲಿ ಪ್ರೋತ್ಸಾಹ ದೊರೆಯಿತು. ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಆಡುವ ಫುಟ್‌ಬಾಲ್ ತಂಡದ ಒಡೆತನವನ್ನು ಈ ಸಮೂಹ ಹೊಂದಿತ್ತು. ಟಾಟಾ ಸ್ಟೀಲ್‌ ಚೆಸ್‌ನ ಮುಖ್ಯ ಪ್ರಾಯೋಜಕತ್ವವೂ ಇದರ ಹೆಮ್ಮೆ. ಅವರ ಕಾಲದಲ್ಲಿ ಟಾಟಾ ಸಮೂಹವು ವಿವಿಧ ಕ್ರೀಡೆಗಳ ಬೆಳವಣಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಂಡಿತು.

‘ಕ್ರೀಡೆಯು ಜೀವನದ ಮಾರ್ಗ ಎಂದೇ ಅವರು ತಿಳಿದಿದ್ದರು. ಹಾಕಿ, ಫುಟ್‌ಬಾಲ್‌, ಆರ್ಚರಿ, ಬಾಕ್ಸಿಂಗ್‌, ಕರಾಟೆ, ಬ್ಯಾಡ್ಮಿಂಟನ್‌, ಅಶ್ವಾರೋಹಣ, ಕರಾಟೆ, ಬ್ಯಾಡ್ಮಿಂಟನ್, ಟೆನಿಸ್‌ ಸೇರಿದಂತೆ 19 ಕ್ರೀಡಾ ಚಟುವಟಿಕೆಯನ್ನು ನಾವು ನಡೆಸುತ್ತಿದ್ದೇವೆ’ ಎಂದು ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಅಕಾಡೆಮಿಯ ಅಧಿಕಾರಿಯೊಬ್ಬರು ತಿಳಿಸಿದರು. ಈ ಅಕಾಡೆಮಿ 1991ರಲ್ಲಿ ಜಮ್ಷೆಡ್‌ಪುರದಲ್ಲಿ ಆರಂಭಗೊಂಡಿತ್ತು.

‘ಚೆಸ್‌ನ ವಿಂಬಲ್ಡನ್‌’:

ಟಾಟಾ ಸ್ಟೀಲ್ ಚೆಸ್‌, ‘ಚೆಸ್‌ನ ವಿಂಬಲ್ಡನ್ ಎಂದು ಹೆಸರಾಗಿದೆ. ಇದು ಜಾಗತಿಕ ಚೆಸ್‌ ವೇಳಾಪಟ್ಟಿಯಲ್ಲಿ ಪ್ರಮುಖ ಟೂರ್ನಿಯಾಗಿದ್ದು ನೆದರ್ಲೆಂಡ್ಸ್‌ನ ವಿಯ್ಕ್ ಆನ್ ಝೀಯಲ್ಲಿ ಪ್ರತೀ ವರ್ಷ ನಡೆಯುತ್ತಿದೆ. 2007ರಲ್ಲಿ ಟಾಟಾ ಸಂಸ್ಥೆ ಇದನ್ನು ಆಯೋಜಿಸುವ ಮೊದಲು ಇದು ಕೋರಸ್‌ ಚೆಸ್‌ ಟೂರ್ನಿ ಎಂದು ಹೆಸರುಪಡೆದಿತ್ತು.

‘ಕೈಗಾರಿಕಾ ಕ್ಷೇತ್ರದ ದಿಗ್ಗಜ ವ್ಯಕ್ತಿಗೆ ದುಃಖದಿಂದ ವಿದಾಯ ಹೇಳಬೇಕಾಗಿದೆ. ಪದ್ಮ ವಿಭೂಷಣ ಪುರಸ್ಕಾರವನ್ನು ನಾವು ಜೊತೆಗೇ ಪಡೆದಿದ್ದೆವು. ಅವರ ವಿನಮ್ರತೆ ನೋಡಿ ಬೆರಗಾಗಿದ್ದೆ’ ಎಂದು ಭಾರತ ಚೆಸ್‌ ತಾರೆ ವಿಶ್ವನಾಥನ್ ಆನಂದ್ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ರೂಸಿ ಮೋದಿ ಅವರು ಟಾಟಾ ಸ್ಟೀಲ್ ಅಧ್ಯಕ್ಷರಾಗಿದ್ದ ವೇಳೆ, 1987ರಲ್ಲಿ ಟಾಟಾ ಫುಟ್‌ಬಾಲ್ ಅಕಾಡೆಮಿ ಆರಂಭವಾಯಿತು. ಆದರೆ ಈ ಯೋಜನೆಗೆ ಪ್ರೇರಕ ಶಕ್ತಿಯಾಗಿ ನಿಂತವರು ರತನ್ ಟಾಟಾ. 1990ರ ದಶಕದಿಂದ ಈ ಅಕಾಡೆಮಿ ಸಾಕಷ್ಟು ರಾಷ್ಟ್ರೀಯ, ಅಂತರರಾಷ್ಟ್ರೀಯ ಆಟಗಾರರನ್ನು ರೂಪಿಸಿದೆ. ಈಗ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಮುಖ್ಯಸ್ಥರಾಗಿರುವ, ಮಾಜಿ ಗೋಲ್‌ ಕೀಪರ್‌ ಕಲ್ಯಾಣ್‌ ಚೌಬೆ, ರೆನೆಡಿ ಸಿಂಗ್, ದೀಪೇಂದು ಬಿಸ್ವಾಸ್, ಕಿರಣ್‌ ಖೊಂಗ್‌ಸಯ್ ಅವರು ಇದೇ ಅಕಾಡೆಮಿಯಿಂದ ತರಬೇತಾದವರು.

2017ರಲ್ಲಿ ಐಎಸ್‌ಎಲ್‌ನಲ್ಲಿ ಜಮ್‌ಷೆಡ್‌ಪುರ ಎಫ್‌ಸಿ ತಂಡ ಸೇರ್ಪಡೆಯಾಗುವ ವೇಳೆ ರತನ್‌ ಟಾಟಾ ಉಪಸ್ಥಿತರಿದ್ದು, ಆಟಗಾರರು, ತರಬೇತಿ ಸಿಬ್ಬಂದಿ ವರ್ಗದ ಜೊತೆ ಸಂವಾದ ನಡೆಸಿದ್ದರು. ಅವರಿಗೆ ತಂಡದ ಆಟಗಾರರ ಹಸ್ತಾಕ್ಷರಗಳನ್ನು ಹೊಂದಿದ ಜೆರ್ಸಿ ನೀಡಲಾಗಿತ್ತು. ಐಎಸ್‌ಎಲ್‌ನಲ್ಲಿ ತಂಡದ ಏಳಿಗೆ ಕಂಡು ಸಂತಸರಾಗಿದ್ದರು’ ಎಂದು ತಂಡದ ಸಿಬ್ಬಂದಿಯೊಬ್ಬರು ತಿಳಿಸಿದರು.

2019ರಲ್ಲಿ ಅವರ ಆಸಕ್ತಿಯ ಫಲವಾಗಿ ಜಮ್ಷೆಡ್‌ಪುರದಲ್ಲಿ ಹಾಕಿ ಅಕಾಡೆಮಿಯೂ ಆರಂಭವಾಯಿತು. ಅವರು ಕ್ರೀಡಾ ಕ್ಷೇತ್ರದಲ್ಲಿ ಹೊಳೆಯುವ ರತ್ನ ಎಂದು ಹಾಕಿ ಇಂಡಿಯಾ ಬಣ್ಣಿಸಿದೆ.

ರತನ್ ಟಾಟಾ ಅವರ ಪರಂಪರೆಯು ಅವರು ಆರಂಭಿಸಿದ ಪ್ರತಿಷ್ಠಾನಗಳ ಮೂಲಕ ಮುಂದುವರಿಯಲಿದೆ ಎಂದು ಕ್ರಿಕೆಟ್‌ ಕಣ್ಮಣಿ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

‘ತಮ್ಮ ಜೀವನ ಮತ್ತು ಮರಣದಲ್ಲೂ ರತನ್ ಟಾಟಾ ಅವರು ದೇಶದ ಮನ ಕಲಕಿದ್ದಾರೆ. ಅವರ ಜೊತೆ ಕಳೆಯುವ ಅವಕಾಶ ದೊರಕಿದ್ದು ನನ್ನ ಪಾಲಿನ ಭಾಗ್ಯ. ಆದರೆ ಅವರೊಡನೆ ಒಡನಾಡದ ದೇಶದ ಕೋಟಿಗಟ್ಟಲೆ ಜನರೂ ದುಃಖತಪ್ತರಾಗಿದ್ದಾರೆ. ಇದು ಅವರು ಬೀರಿದ ಗಾಢ ಪ್ರಭಾವಕ್ಕೆ ಪುರಾವೆ’ ಎಂದು ತೆಂಡೂಲ್ಕರ್ ಜಾಲತಾಣದಲ್ಲಿ ಬರೆದಿದ್ದಾರೆ.

ಭಾರತದ ಆರ್ಚರಿ ತಾರೆಯರಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್‌ ಅವರು ಈ ಮಟ್ಟಕ್ಕೆ ಬೆಳೆಯಲು ಜಮ್ಷೆಡ್‌ಪುರದ ಟಾಟಾ ಅರ್ಚರಿ ಅಕಾಡೆಮಿಯ ಕೊಡುಗೆಯೂ ಇದೆ. ಅವರು ಇಲ್ಲಿಯೇ ತರಬೇತಿ ಪಡೆದಿದ್ದರು.

‘ರತನ್ ಟಾಟಾಜಿ ನಿಧನದ ಸುದ್ದಿ ತಿಳಿದು ಬೇಸರವಾಯಿತು. ಅವರು ದೂರದೃಷ್ಟಿಯುಳ್ಳ ಮುತ್ಸದ್ದಿ. ಅವರ ಜೊತೆಗೆ ಕಳೆದ ಕ್ಷಣವನ್ನು ನಾನು ಮರೆಯುವಂತೇ ಇಲ್ಲ. ಅವರು ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದರು. ಓಂ ಶಾಂತಿ’ ಎಂದು ಒಲಿಂಪಿಕ್ಸ್‌ ಚಿನ್ನ ಗೆದ್ದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಸೈನಾ ನೆಹ್ವಾಲ್ ಅವರೂ ಟಾಟಾ ಕೊಡುಗೆ ಸ್ಮರಿಸಿದ್ದಾರೆ.

‘ರತನ್ ಟಾಟಾ ಕೊಡುಗೆ ಉದ್ಯಮದಾಚೆಯೂ ಬೆಳೆದಿತ್ತು. ಉದ್ಯಮದಿಂದ ಬಂದ ಲಾಭವನ್ನು ಸಮಾಜಕ್ಕೆ ಮರಳಿ ನೀಡುವ ಅವರ ಪರಂಪರೆ ಮುಂದಿನ ತಲೆಮಾರುಗಳಿಗೆ ಸ್ಫೂರ್ತಿಯಾಗಲಿದೆ’ ಎಂದು ಭಾರತದ ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.