ADVERTISEMENT

ವಿವಾದರಹಿತ ಪಂಚ ರಾಜ್ಯ ಚುನಾವಣೆ: ಯಶಸ್ಸಿನ ಹಿಂದೆ ಐವರು ಐಎಎಸ್‌ ಅಧಿಕಾರಿಗಳು

ಏಜೆನ್ಸೀಸ್
Published 13 ಡಿಸೆಂಬರ್ 2018, 15:34 IST
Last Updated 13 ಡಿಸೆಂಬರ್ 2018, 15:34 IST
ಮತ ಚಲಾಯಿಸುವ ಮುನ್ನ ಮಿಜೋರಾಂ ಮತದಾರರು ತಮ್ಮ ಗುರುತಿನ ಪತ್ರಗಳನ್ನು ಪ್ರದರ್ಶಿಸಿದ್ದು ಹೀಗೆ. (ಪಿಟಿಐ ಚಿತ್ರ)
ಮತ ಚಲಾಯಿಸುವ ಮುನ್ನ ಮಿಜೋರಾಂ ಮತದಾರರು ತಮ್ಮ ಗುರುತಿನ ಪತ್ರಗಳನ್ನು ಪ್ರದರ್ಶಿಸಿದ್ದು ಹೀಗೆ. (ಪಿಟಿಐ ಚಿತ್ರ)   

ನವದೆಹಲಿ: ಚುನಾವಣಾ ಆಯೋಗವು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರದ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಆರೋಪಗಳು ಸಾಮಾನ್ಯ. ಆದರೆ, ಇತ್ತೀಚೆಗೆ ಮುಕ್ತಾಯವಾದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆ ಮಾತಿಗೆ ಅಪವಾದ ಎಂಬಂತೆ ಚುನಾವಣಾ ಆಯೋಗವು ಕಾರ್ಯನಿರ್ವಹಿಸಿದೆ.

ಇವಿಎಂಗಳ ಮೂಲಕ ಅಕ್ರಮ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌, ತೆಲಂಗಾಣದಲ್ಲಿಇವಿಎಂಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸಿತ್ತು. ಅದಲ್ಲದೆಮಧ್ಯಪ್ರದೇಶದ ಕ್ಷೇತ್ರವೊಂದರ ಮತಯಂತ್ರಗಳು ಎರಡು ದಿನ ತಡವಾಗಿ ಸ್ಟ್ರಾಂಗ್‌ ರೂಂ ಗೆ ತಲುಪಿದ್ದವು. ಈ ಪ್ರಕರಣಗಳನ್ನು ಹೊರತುಪಡಿಸಿ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸಗಡ ಹಾಗೂ ಮಿಜೋರಾಂ ವಿಧಾನಸಭೆಗಳಿಗೆ ನಡೆದ ಚುನಾವಣೆಗಳನ್ನು ವಿವಾದರಹಿತವಾಗಿ ನಡೆಸುವಲ್ಲಿ ಆಯೋಗವು ಯಶಸ್ವಿಯಾಗಿದೆ.

ಇದರೊಂದಿಗೆ ಆಯೋಗವು ಆಡಳಿತ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪದಿಂದ ಹೊರಬರುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಆಯೋಗದ ಈ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ ಐದು ರಾಜ್ಯಗಳ ಚುನಾವಣಾಧಿಕಾರಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ADVERTISEMENT

ತೆಲಂಗಾಣ

ರಜತ್‌ ಕುಮಾರ್‌ ಅವರುತೆಲಂಗಾಣ ಮುಖ್ಯ ಚುನಾವಣಾಧಿಕಾರಿಯಾಗಿ(ಸಿಎಒ) ಫೆಬ್ರವರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಮತದಾನಕ್ಕೆ ಎರಡು ದಿನಗಳು ಬಾಕಿ ಇದ್ದಾಗ ಮತದಾರರ ಪಟ್ಟಿ ತಿದ್ದುಪಡಿಗೆ ಸಂಬಂಧಿಸಿದ ಗೊಂದಲ ಬೆಳಕಿಗೆ ಬಂದಿತ್ತು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾ ಆಯೋಗಕ್ಕೆ ದೂರು ನೀಡಿದ್ದರು. ಅವರ ಹೇಳಿಕೆಗೆ ಮತ್ತೆ ಕೆಲವರು ದನಿಗೂಡಿಸಿದ್ದರು. ಈ ಸಂಬಂಧ ಸ್ಪಷ್ಟನೆ ನೀಡಿದ್ದ ಕುಮಾರ್‌, ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುವ ಕಾರ್ಯ ಮುಂದುವರಿದಿದೆ. ಬಿಟ್ಟುಹೋಗಿರುವ ಮತದಾರರ ಹೆಸರುಗಳನ್ನು ಸೇರಿಸಲಾಗುವುದು ಎಂದಿದ್ದರು.

1991ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಕುಮಾರ್‌ ತೆಲಂಗಾಣಸಿಎಒ ಆಗಿಅಧಿಕಾರ ಸ್ವೀಕರಿಸುವ ಮೊದಲು ಅರಣ್ಯ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಛತ್ತೀಸಗಡ

ಸದ್ಯ ಮುಕ್ತಾವಾದ ಇತರ ಐದು ರಾಜ್ಯಗಳಿಗೆ ಹೋಲಿಸಿದರೆ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇರುವುದು ಛತ್ತೀಸಗಡದಲ್ಲಿಯೇ. ನಿರಂತರ ನಕ್ಸಲ್‌ ಭೀತಿಯಲ್ಲಿ ಚುನಾವಣೆಯನ್ನು ವ್ಯವಸ್ಥಿತವಾಗಿ ಆಯೋಜಿಸಿದ ಶ್ರೇಯ ಇಲ್ಲಿನಸಿಎಒಸುಬ್ರಾತ್‌ ಸಾಹೋ ಅವರಿಗೆ ಸಲ್ಲಬೇಕು.

ನವೆಂಬರ್‌ ತಿಂಗಳಲ್ಲಿ ಮತದಾನಕ್ಕೆ ಕೆಲವು ದಿನಗಳಿದ್ದಾಗಲೇ ನಕ್ಸಲ್‌ ದಾಳಿಗಳು ನಡೆದಿದ್ದವು. ಹೀಗಾಗಿ ಸಾಹೋ ಅವರು ಹೆಚ್ಚಿನ ಭದ್ರತೆಗೆ ಒತ್ತು ನೀಡಿದ್ದರು. ಮತದಾರರನ್ನು ಸೆಳೆಯುವ ಸಲುವಾಗಿ ಫೇಸ್‌ಬುಕ್‌ ಲೈವ್‌ ಮೂಲಕ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದರು.

ಸಾಹೋ ಅವರು ಛತ್ತೀಸಗಡ ಕೆಡರ್‌ನ 1992ನೇ ಬ್ಯಾಚ್‌ ಐಎಎಸ್‌ ಅಧಿಕಾರಿಯಾಗಿದ್ದು, ಚುನಾವಣಾಧಿಕಾರಿಯಾಗುವ ಮುನ್ನ ಧಂತರಿ, ಸರ್ಗುಜಾ, ದುರ್ಗ್‌ ಜಿಲ್ಲೆಗಳ ಮ್ಯಾಜಿಸ್ಟ್ರೇಟ್‌ ಆಗಿ ಕಾರ್ಯನಿರ್ವಹಿಸಿದ್ದರು.

ಮಧ್ಯಪ್ರದೇಶ

ಚುನಾವಣೆಗೆ ಅಣಿಯಾಗುತ್ತಿದ್ದ ಮಧ್ಯಪ್ರದೇಶದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಾದಗಳು ತಲೆದೋರಿದ್ದ ವೇಳೆರಾಜ್ಯ ಮುಖ್ಯ ಚುನಾವಣಾಧಿಕಾರಿ ಅಧಿಕಾರ ವಹಿಸಿಕೊಂಡವರುವಿ.ಎಲ್‌. ಕಾಂತಾ ರಾವ್‌.

ರಾಜ್ಯದಲ್ಲಿ ನಕಲಿ ಮತದಾರರ ಸಂಖ್ಯೆ ಹೆಚ್ಚಳವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದ್ದ ಬೆನ್ನಲ್ಲೇ, ಸಿಎಒ ಸಲಿನಾ ಸಿಂಗ್‌ ಅವರನ್ನು ಅಧಿಕಾರದಿಂದ ತೆರವುಗೊಳಿಸಲಾಗಿತ್ತು. ಅನಂತರ ರಾವ್‌ ನೇಮಕವಾಗಿತ್ತು.

1992 ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ರಾವ್‌, ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕವಾಗುವ ಮೊದಲು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 2013ರಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಹೆಚ್ಚುವರಿ ಚುನಾವಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದರು.

ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ವಿವಾದ ತಲೆದೋರದಂತೆ ಕಾರ್ಯನಿರ್ವಹಿಸಿದರಾವ್‌, ಮತ ಎಣಿಕೆ ಹಿಂದಿನ ದಿನವೂ ಸ್ಟ್ರಾಂಗ್‌ ರೂಮ್‌ಗಳಿಗೆ ಭೇಟಿ ನೀಡಿ ಮತಯಂತ್ರಗಳ ಭದ್ರತೆಯನ್ನು ಖಚಿತಪಡಿಸಿಕೊಂಡಿದ್ದರು.

ರಾಜಸ್ಥಾನ

ಚುನಾವಣಾ ಆಯೋಗದ ನಿಯಮಕ್ಕೆ ವಿರುದ್ಧವಾಗಿ ತಿದ್ದುಪಡಿ ಮಾಡಲು ಸಾಧ್ಯವಿರುವ ಮತದಾರರ ಪಟ್ಟಿಯನ್ನು ಪ್ರಕಟಿಸಿದ ಆರೋಪದ ಮೇಲೆ ಅಶ್ವಿನಿ ಭಗತ್‌ ಅವರನ್ನುಸಿಎಒಹುದ್ದೆಯಿಂದ ತೆರವುಗೊಳಿಸಲಾಗಿತ್ತು. ನಂತರ ಆ ಸ್ಥಾನಕ್ಕೆ ನೇಮಕವಾದವರು ಆನಂದ್‌ ಕುಮಾರ್‌.

ಕುಮಾರ್‌ ಅವರು ಇವಿಎಂಗಳನ್ನು ಸುರಕ್ಷಿತವಾಗಿಡಲು ಕೈಗೊಂಡಿದ್ದ ಭದ್ರತಾ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು.

1994ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಕುಮಾರ್ ಹರಿಯಾಣದ ರೇವರಿಯವರು. ಚುನಾವಣಾಧಿಕಾರಿಯಾಗಿ ನೇಮಕವಾಗುವುದಕ್ಕೂ ಮೊದಲು, ಧೋಲ್‌ಪುರ್‌, ದುಂಗಾರ್‌ಪುರ್‌, ಬರ್ಮೆರ್‌ ಹಾಗೂ ಉದಯಪರ್‌ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಮಿಜೋರಾಂ

ಆಶಿಶ್‌ ಕುಂದ್ರಾ ಅವರು ಚುನಾವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ಹಲವು ವಿವಾದಗಳಿದ್ದವು. ತ್ರಿಪುರ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದವರನ್ನು ಕರೆತಂದು ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಹಿಂದಿನಸಿಎಒಎಸ್‌.ಬಿ.ಶಶಾಂಕ್‌ ವಿರುದ್ಧ ಕೇಳಿಬಂದಿತ್ತು. ಹೀಗಾಗಿ ಅವರ ಜಾಗಕ್ಕೆಕುಂದ್ರಾ ಬರಬೇಕಾಯಿತು.

ಅರುಣಾಚಲ ಪ್ರದೇಶ, ಗೊವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶಗಳ (ಎಜಿಎಂಯುಟಿ) ಕೆಡರ್‌ನ 1996ರ ಬ್ಯಾಚ್‌ ಅಧಿಕಾರಿಯಾಗಿರುವ ಕುಂದ್ರಾ,ಅರುಣಾಚಲ ಪ್ರದೇಶದ ಹಣಕಾಸು ಯೋಜನೆ ಮತ್ತು ಬಂಡವಾಳ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು. ಅನುವಾದ: ಅಭಿಲಾಷ್ ಎಸ್‌.ಡಿ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.