ವರ್ಧಾ: ‘ಗಣೇಶ ಪೂಜೆಯನ್ನೂ ಕಾಂಗ್ರೆಸ್ ದ್ವೇಷಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವರ್ಧಾದಲ್ಲಿ ಶುಕ್ರವಾರ ಪುನರುಚ್ಚರಿಸಿದರು. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಗ್ರಹವನ್ನು ಪೊಲೀಸ್ ವಾಹನದಲ್ಲಿ ಒಯ್ದ ಘಟನೆಯನ್ನು ಅವರು ಇಲ್ಲಿಯೂ ಉಲ್ಲೇಖಿಸಿದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಒಂದು ವರ್ಷ ಪೂರೈಸಿದ ಸಲುವಾಗಿ ಇಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಹೀಗೆ ಹೇಳಿದರು. ‘ನಾನು ಗಣೇಶ ಪೂಜೆಗೆ ಹೋಗಿದ್ದನ್ನು ‘ಓಲೈಕೆ ರಾಜಕಾರಣ’ ಎಂದು ಟೀಕಿಸಿದ ಕಾಂಗ್ರೆಸ್, ಕರ್ನಾಟಕದಲ್ಲಿ ಗಣಪತಿ ಬಪ್ಪಾನನ್ನು ಕಂಬಿಗಳ ಹಿಂದೆ ಇರಿಸಿತು. ಗಣಪತಿ ಬಪ್ಪಾನಿಗೆ ಆದ ಅವಮಾನದ ಕುರಿತು ಮಹಾರಾಷ್ಟ್ರದಲ್ಲಿಯ ಕಾಂಗ್ರೆಸ್ ಮಿತ್ರಪಕ್ಷಗಳು ಮೌನ ಕಾಯ್ದುಕೊಂಡವು’ ಎಂದರು.
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ಚುನಾವಣೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನಾವು ಕಾಂಗ್ರೆಸ್‌ನ ಇಬ್ಬಗೆ ನೀತಿ ಕುರಿತು ಎಚ್ಚರಿಕೆಯಿಂದ ಇರಬೇಕು. ಸುಳ್ಳು ಮತ್ತು ವಂಚನೆ ಕಾಂಗ್ರೆಸ್‌ನ ಹಾಲ್‌ಮಾರ್ಕ್ ಆಗಿದೆ’ ಎಂದರು.
‘ಆ ಪಕ್ಷವನ್ನು ತುಕ್ಡೆ ತುಕ್ಡೆ ತಂಡ ಮತ್ತು ನಗರ ನಕ್ಸಲರು ಮುನ್ನಡೆಸುತ್ತಿದ್ದಾರೆ. ಇಂದು ನೀವು ನೋಡುತ್ತಿರುವ ಕಾಂಗ್ರೆಸ್ ಮಹಾತ್ಮ ಗಾಂಧಿ ಅವರಿದ್ದ ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ದೇಹದೊಳಗೆ ದ್ವೇಷವೆಂಬ ಭೂತ ಸೇರಿಕೊಂಡಿದೆ. ಕಾಂಗ್ರೆಸ್‌ನ ಆತ್ಮವಾಗಿದ್ದ ‘ರಾಷ್ಟ್ರಭಕ್ತಿ’ ಇಂದು ಮೃತಪಟ್ಟಿದೆ’ ಎಂದರು.
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಾದ ರಾಹುಲ್ ಗಾಂಧಿ ಅವರ ಹೆಸರು ಉಲ್ಲೇಖಿಸದೇ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ಕಾಂಗ್ರೆಸ್‌ನ ಭಾರತ ವಿರೋಧಿ ನಾಯಕರು ವಿದೇಶಗಳಲ್ಲಿ ದೇಶದ ಘನತೆಗೆ ಧಕ್ಕೆ ತರುತ್ತಿದ್ದಾರೆ’ ಎಂದರು.
ಯೋಜನೆಗೆ ಚಾಲನೆ: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಮೋದಿ ಅವರು ಯೋಜನೆಯ ಕೆಲ ಫಲಾನುಭವಿಗಳ ಜೊತೆ ಮಾತುಕತೆ ನಡೆಸಿದರು. ಮಹಾರಾಷ್ಟ್ರ ಸರ್ಕಾರದ ಯೋಜನೆಗಳಾದ ‘ಆಚಾರ್ಯ ಚಾಣಕ್ಯ ಕೌಶಲಾಭಿವೃದ್ಧಿ ಕೇಂದ್ರ’, ‘ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೋಳ್ಕರ್– ಮಹಿಳಾ ಸ್ಟಾರ್ಟ್‌ಅಪ್ ಯೋಜನೆ’ಗೆ ಚಾಲನೆ ನೀಡಿದರು.
ಇದೇ ವೇಳೆ, ರಾಜ್ಯದ ಅಮರಾವತಿಯಲ್ಲಿ ನಿರ್ಮಾಣವಾಗಲಿರುವ ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ಸ್ ಆ್ಯಂಡ್ ಅಪ್ಪಾರೆಕ್ ಪಾರ್ಕ್‌ಗೆ ಶಿಲಾನ್ಯಾಸ ನೆರವೇರಿಸಿದರು.
ಕಾಂಗ್ರೆಸ್ ಪಕ್ಷವು ರೈತರನ್ನು ಕೇವಲ ಭ್ರಷ್ಟಾಚಾರಕ್ಕಾಗಿ ಬಳಸಿಕೊಂಡಿದೆ. ನಾವು ಕಾಂಗ್ರೆಸ್‌ಗೆ ಮತ್ತೊಂದು ಅವಕಾಶವನ್ನು ನೀಡಿದರೆ ಅದು ರೈತರನ್ನು ನಾಶಗೊಳಿಸುತ್ತದೆನರೇಂದ್ರ ಮೋದಿ ಪ್ರಧಾನಿ
‘ಗಾಂಧಿ ಗೋಡ್ಸೆ– ಮೋದಿ ಯಾರ ಜೊತೆ ಗುರುತಿಸಿಕೊಳ್ಳುತ್ತಾರೆ?’
ನವದೆಹಲಿ: ‘ಮಹಾತ್ಮ ಗಾಂಧಿ ಮತ್ತು ನಾಥಾರಾಂ ಗೋಡ್ಸೆ ಅವರಿಬ್ಬರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾರ ಜೊತೆ ನಿಲ್ಲುತ್ತಾರೆ’ ಎಂದು ಮೋದಿ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸಂಬಂಧಿಸಿದ ಕಾರ್ಯಕ್ರಮದ ಅಂಗವಾಗಿ ಮೋದಿ ಅವರು ಮಹಾರಾಷ್ಟ್ರದ ವರ್ಧಾಗೆ ತೆರಳಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಮೋದಿ ಅವರಿಗೆ ಮೂರು ಪ್ರಶ್ನೆಗಳನ್ನು ‘ಎಕ್ಸ್’ ಜಾಲತಾಣದ ಮೂಲಕ ಕೇಳಿದ್ದಾರೆ. ರೈತರ ಆತ್ಮಹತ್ಯೆ ತಡೆಯಲು ಬಿಜೆಪಿ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಅರಣ್ಯ ಹಕ್ಕು ಕಾಯ್ದೆ ಜಾರಿ ವೇಳೆ ಆದಿವಾಸಿ ಸಮುದಾಯವನ್ನು ಕೈಬಿಟ್ಟಿದ್ದೇಕೆ–ಇವು ಜೈರಾಮ್ ಅವರು ಕೇಳಿರುವ ಇನ್ನೆರಡು ಪ್ರಶ್ನೆಗಳು. ಮಹಾರಾಷ್ಟ್ರದಲ್ಲಿ ಪ್ರತಿದಿನ ಕನಿಷ್ಠ ಏಳು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಳೆದ ವರ್ಷ ಜನವರಿಯಿಂದ ಅಕ್ಟೋಬರ್‌ವರೆಗೆ 2366 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.