ತಿರುವನಂತಪುರ: ವಿಮಾನದ ರನ್‌ವೇನಲ್ಲಿ ಶ್ರೀ ಪದ್ಮನಾಭಸ್ವಾಮಿ ದೇವರ ಮೆರವಣಿಗೆ 'ಅರಟ್ಟು' ಸಾಗುವ ಹಿನ್ನೆಲೆಯಲ್ಲಿ ಸೋಮವಾರ (ಅ.23) ಐದು ಗಂಟೆಗಳ ಕಾಲ ತಿರುವನಂತಪುರ ವಿಮಾನ ನಿಲ್ದಾಣದ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿದೆ.
ದೇವರ ಮೆರವಣಿಗೆ ಸಾಗುವ ಅವಧಿಯಲ್ಲಿ ವಿಮಾನ ಹಾರಾಟ ಸ್ಥಗಿತಗೊಳ್ಳುವ ಪದ್ಧತಿ ದಶಕಗಳ ಹಿಂದಿನಿಂದಲೂ ಜಾರಿಯಲ್ಲಿದೆ.
'ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಿಂದ 'ಅಲ್ಪಾಸ್ಸಿ ಅರಟ್ಟು' ಮೆರವಣಿಗೆಗೆ ಅನುಕೂಲವಾಗುವಂತೆ ಸೋಮವಾರ ಸಂಜೆ 4 ಗಂಟೆಯಿಂದ ರಾತ್ರಿ 9 ರವರೆಗೆ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು' ಎಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರಕಟಣೆ ಹೊರಡಿಸಿದೆ.
ನಾಲ್ಕು ವಿಮಾನಗಳ ಸೇವೆಗಳನ್ನು ಮರುಹೊಂದಿಸಲಾಗಿದೆ. ಮೆರವಣಿಗೆಯು ದೇವಸ್ಥಾನಕ್ಕೆ ಹಿಂದಿರುಗಿದ ನಂತರ, ರನ್ ವೇಯನ್ನು ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ಪರಿಶೀಲಿನೆ ನಡೆಸಿ ವಿಮಾನ ಸೇವೆಗಳನ್ನು ಪುನರಾರಂಭಗೊಳಿಸಲಾಗುತ್ತದೆ ಎಂದು ಅದು ಹೇಳಿದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಮೆರವಣಿಗೆ ಜರುಗುತ್ತದೆ.
ವಿಗ್ರಹಗಳ ಪವಿತ್ರ ಸ್ನಾನಕ್ಕಾಗಿ ಶಂಗುಮುಖಂ ಕಡಲತೀರವನ್ನು ತಲುಪಲು ಮೆರವಣಿಗೆಯು ವಿಮಾನ ನಿಲ್ದಾಣ ಇರುವ ಮಾರ್ಗದಲ್ಲಿ ಹಾದುಹೋಗುತ್ತದೆ. ಈ ಪದ್ಧತಿಯು ಶತಮಾನಗಳ ಹಿಂದೆಯೇ ಪ್ರಾರಂಭವಾಗಿತ್ತು ಎನ್ನಲಾಗಿದ್ದು 1932 ರಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯ ನಂತರವೂ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.