ಜೈಪುರ: ಭಾರತವು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದು ಅಲ್ಲ.ಹಿಂದುತ್ವವಾದಿಗಳನ್ನು ಅಧಿಕಾರದಿಂದ ಉಚ್ಚಾಟಿಸಿ ದೇಶದಲ್ಲಿ ಹಿಂದೂಗಳ ಆಳ್ವಿಕೆ ನೆಲೆಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷವು ಜೈಪುರದಲ್ಲಿ ಏರ್ಪಡಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾರ್ಯಕ್ರಮದಲ್ಲಿ ಇದ್ದರು.
‘ಹಿಂದುತ್ವವಾದಿ’ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬೆನ್ನಿಗೆ ಇರಿದಿದ್ದಾರೆ ಮತ್ತು ಬೆರಳೆಣಿಕೆಯ ಉದ್ಯಮಿಗಳ ಪರವಾಗಿದ್ದಾರೆ ಎಂದು ರಾಹುಲ್ ಟೀಕಿಸಿದರು. ಉತ್ತರ ಪ್ರದೇಶ ಮತ್ತು ಬಿಹಾರದಂತಹ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಜೈಪುರದಲ್ಲಿ ಕಾಂಗ್ರೆಸ್ ಪಕ್ಷವು ಬಲಪ್ರದರ್ಶನಕ್ಕಾಗಿ ಸಮಾವೇಶ ಏರ್ಪಡಿಸಿದೆ.
‘ನಾನು ಹಿಂದೂ, ಆದರೆ ಹಿಂದುತ್ವವಾದಿ ಅಲ್ಲ. ಹಿಂದೂವಿನ ಹೃದಯವು ಪ್ರೀತಿಯಿಂದ ತುಂಬಿರುತ್ತದೆ. ಹಿಂದುತ್ವವಾದಿಯ ಹೃದಯದಲ್ಲಿ ಭೀತಿ ಮತ್ತು ದ್ವೇಷ ಇರುತ್ತದೆ. ಹಿಂದೂವಿಗೆ ಯಾರ ಭಯವೂ ಇರುವುದಿಲ್ಲ, ಆತ ಎಲ್ಲರನ್ನೂ ಅಪ್ಪಿಕೊಳ್ಳುತ್ತಾನೆ, ಎಲ್ಲ ಧರ್ಮಗಳನ್ನೂ ಗೌರವಿಸುತ್ತಾನೆ ಮತ್ತು ಸತ್ಯವನ್ನು ಅರಸುತ್ತಾನೆ’ ಎಂದು ರಾಹುಲ್ ಪ್ರತಿಪಾದಿಸಿದ್ದಾರೆ. ಹಿಂದೂ ಮತ್ತು ಹಿಂದುತ್ವದ ನಡುವಣ ವ್ಯತ್ಯಾಸವನ್ನು ಕೆಲವು ವಾರಗಳ ಹಿಂದೆಯೂ ರಾಹುಲ್ ವಿವರಿಸಿದ್ದರು.
‘ಹಿಂದೂಗಳನ್ನು ದಮನ ಮಾಡಲು ಸಾಧ್ಯವಿಲ್ಲ. ಮೂರು ಸಾವಿರ ವರ್ಷಗಳಲ್ಲಿ ಅದು ಸಾಧ್ಯವಾಗಿಲ್ಲ, ಈಗಲೂ ಸಾಧ್ಯವಿಲ್ಲ. ನಮ ಗೆ ಸಾವಿನ ಭಯವೂ ಇಲ್ಲ’ ಎಂದರು. ‘ನಕಲಿ ಹಿಂದೂ’ಗಳನ್ನೂ ಅವರು ಟೀಕಿಸಿದರು. ಹಿಂದುತ್ವವಾದಿಗೆ ಯಾವ ಬೆಲೆ ತೆತ್ತಾದರೂ ಅಧಿಕಾರ ಪಡೆಯುವ ಆಸೆ ಇರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಏಕೆಂದರೆ, ರೈತರು ದೇಶದ ಬೆನ್ನೆಲುಬು ಎಂಬುದು ಕಾಂಗ್ರೆಸ್‌ಗೆ ಗೊತ್ತಿದೆ.ಪ್ರಧಾನಿ ಹಿಂದುತ್ವವಾದಿ ಆಗಿರುವುದರಿಂದಲೇ ರೈತರ ಬೆನ್ನಿಗೆ ಇರಿದಿದ್ದಾರೆ. ‘ಹಿಂದೂ ರೈತರು ಎದ್ದು ನಿಂತಾಗ ಹಿಂದುತ್ವವಾದಿಯು ‘ನಾನು ಕ್ಷಮೆ ಕೇಳುತ್ತೇನೆ’ ಎಂದರು’ ಎಂದು ರಾಹುಲ್ ಹೇಳಿದ್ದಾರೆ.
‘ದೇಶದಲ್ಲಿ ಹಣದುಬ್ಬರ ಇದ್ದರೆ ಸಂಕಷ್ಟ ಇರುತ್ತದೆ. ಇದು ಹಿಂದುತ್ವವಾದಿಗಳ ಕೆಲಸ. ಯಾವ ಪರಿಸ್ಥಿತಿಯೇ ಇರಲಿ, ಹಿಂದುತ್ವವಾದಿಗೆ ಅಧಿಕಾರದ ದಾಹ ಇದ್ದೇ ಇರುತ್ತದೆ’ ಎಂದು ಅವರು ಆರೋಪಿಸಿದರು.
ಈ ಸಮಾವೇಶವು ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಎಂದು ಅವರು ಬಣ್ಣಿಸಿದರು.
ಪ್ರಿಯಾಂಕಾ ಅವರೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷವು 70 ವರ್ಷಗಳಲ್ಲಿ ಕಟ್ಟಿದ್ದನ್ನು ಮೋದಿನೇತೃತ್ವದ ಸರ್ಕಾರವು ತನ್ನ ‘ಕೈಗಾರಿಕೋದ್ಯಮಿ ಗೆಳೆಯ’ರಿಗೆ ಮಾರಾಟ ಮಾಡಲು ಬಯಸಿದೆ ಎಂದು ಟೀಕಿಸಿದರು. ಕೇಂದ್ರಸರ್ಕಾರ ಏಳು ವರ್ಷಗಳಲ್ಲಿ ಜನರಿಗಾಗಿ ಮಾಡಿದ್ದೇನು ಎಂದು ಪ್ರಶ್ನಿಸಿದರು.
ಭಗವದ್ಗೀತೆ ಉಲ್ಲೇಖ
ಭಗವದ್ಗೀತೆಯೇ ಇರಲಿ ರಾಮಾಯಣವೇ ಇರಲಿ. ಯಾವ ಗ್ರಂಥದಲ್ಲಿಯೂ ಬಡವರನ್ನು ಕೊಂದು ಹಾಕಿ ಮತ್ತು ತುಳಿಯಿರಿ ಎಂದು ಹೇಳಿಲ್ಲ. ಅಧಿಕಾರಕ್ಕಾಗಿ ಸಹೋದರರನ್ನೇ ಕೊಲ್ಲುವಂತೆ ಕೃಷ್ಣನು ಅರ್ಜುನನಿಗೆ ಹೇಳಿಲ್ಲ. ಸಾವು ಸಂಭವಿಸುತ್ತದೆ ಎಂದಾದರೂ ಸತ್ಯಕ್ಕಾಗಿ ಹೋರಾಡಬೇಕು ಎಂದು ಭಗವದ್ಗೀತೆಯಲ್ಲಿ ಬರೆದಿದೆ ಎಂದು ರಾಹುಲ್ ಹೇಳಿದರು.
ವಿಳಂಬವಾಗಿ ಬಂದ ಚನ್ನಿ
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಜೈಪುರ ತಲುಪುವಾಗ ತಡವಾಗಿತ್ತು. ಸಮಾವೇಶ ಮುಗಿದಿತ್ತು ಎಂದು ಮೂಲಗಳು ಹೇಳಿವೆ. ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಅವರು ದೆಹಲಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಚನ್ನಿ ಅವರು ವಿಮಾನ ನಿಲ್ದಾಣಕ್ಕೆ ಹೋಗಿ ಅವರನ್ನು ಭೇಟಿಯಾದರು.
***
ಹಿಂದೂ ಮತ್ತು ಹಿಂದುತ್ವದ ನಡುವೆ ವ್ಯತ್ಯಾಸ ಇದೆ. ಮಹಾತ್ಮ ಗಾಂಧಿ ಹಿಂದೂ ಆಗಿದ್ದರು. ಅವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಹಿಂದುತ್ವವಾದಿಯಾಗಿದ್ದ
- ರಾಹುಲ್ ಗಾಂಧಿ,ಕಾಂಗ್ರೆಸ್ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.