ADVERTISEMENT

'ಇದು ಬಾಂಗ್ಲಾದೇಶವಲ್ಲ, ಹಿಂದಿ ಕಲಿ': ಭಾಷೆಯ ವಿಚಾರವಾಗಿ ಕೋಲ್ಕತ್ತದಲ್ಲಿ ವಾಗ್ವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2024, 13:19 IST
Last Updated 24 ನವೆಂಬರ್ 2024, 13:19 IST
<div class="paragraphs"><p>ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಿಂದ ತೆಗೆದ ಚಿತ್ರ</p></div>

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಿಂದ ತೆಗೆದ ಚಿತ್ರ

   

ಬಹುಸಂಸ್ಕೃತಿ, ವಿವಿಧ ಸಂಪ್ರದಾಯಗಳ ತವರಾಗಿರುವ ಭಾರತದಲ್ಲಿ, ಭಾಷೆಯು ಹಲವರ ಪಾಲಿಗೆ ಘನತೆ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ.

ಹಿಂದಿ ಭಾಷೆ ಹೇರಿಕೆ ಕುರಿತ ಚರ್ಚೆಗಳು, ವಾಗ್ವಾದಗಳು ದೇಶದಾದ್ಯಂತ ಆಗಾಗ ಮುನ್ನೆಲೆಗೆ ಬರುತ್ತಿರುತ್ತವೆ. ದಕ್ಷಿಣದ ರಾಜ್ಯಗಳ ಮಟ್ಟಿಗಂತೂ ಇದು ಸದಾ ಚಾಲ್ತಿಯಲ್ಲಿರುವ ವಿಚಾರ. ಆದರೆ, ಇಂತಹ ಒಂದು ಪ್ರಕರಣ, ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ವರದಿಯಾಗಿದೆ.

ADVERTISEMENT

ಕೋಲ್ಕತ್ತ ಮೆಟ್ರೊದಲ್ಲಿ ಹಿಂದಿ ಮಾತನಾಡುವ ಮಹಿಳೆಯೊಬ್ಬರು ಬಂಗಾಳಿ ಮಾತನಾಡುವ ಸಹ ಪ್ರಯಾಣಿಕ ಮಹಿಳೆಯೊಂದಿಗೆ ವಾಗ್ವಾದ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಹಿಂದಿ ಮಾತನಾಡುವ ಮಹಿಳೆ, 'ನೀನು ಬಾಂಗ್ಲಾದೇಶದಲ್ಲಿ ಇಲ್ಲ. ನೀನಿರುವುದು ಭಾರತದಲ್ಲಿ. ಪಶ್ಚಿಮ ಬಂಗಾಳ ಭಾರತದ ಭಾಗ. ನೀನು ಹಿಂದಿ ಕಲಿಯಬೇಕು. ನೀನು ಬಂಗಾಳಿ ಮಾತನಾಡಬಹದು. ಆದರೆ, ಭಾರತದಲ್ಲಿ ವಾಸವಿದ್ದರೂ ಹಿಂದಿ ಮಾತನಾಡುವುದಿಲ್ಲವೇ?' ಎಂದು ಮತ್ತೊಬ್ಬ ಮಹಿಳೆಗೆ ಕೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಂಗಾಳಿ ಮಹಿಳೆಯು, 'ನಾನು ಪಶ್ಚಿಮ ಬಂಗಾಳದಲ್ಲಿದ್ದೇನೆ. ಇದು ನನ್ನ ತಾಯ್ನಾಡು. ನಿನ್ನದಲ್ಲ. ನನ್ನ ರಾಜ್ಯದಲ್ಲಿ ಇದ್ದು ಅದು ಹೇಗೆ ಈ ರೀತಿ ಮಾತನಾಡುತ್ತಿದ್ದೀಯ? ಬಂಗಾಳಿ ಮಾತನಾಡುತ್ತೇನೆ ಎಂದು ಅವಮಾನಿಸುತ್ತಿದ್ದೀಯ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದಿ ಮಾತನಾಡುವ ಮಹಿಳೆ ಇದಕ್ಕೆ ಪ್ರತಿಯಾಗಿ, 'ಮೆಟ್ರೊ ನಿನ್ನದಲ್ಲ. ಪಶ್ಚಿಮ ಬಂಗಾಳವೂ ನಿನ್ನದಲ್ಲ' ಎಂದಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಬಂಗಾಳಿ ಮಹಿಳೆ, 'ಪಶ್ಚಿಮ ಬಂಗಾಳ ನಮ್ಮದು. ಹಾಗಾಗಿ, ಮೆಟ್ರೊ ಸಹ ನಮ್ಮದೇ. ಇಲ್ಲಿನ ಜನರ ತೆರಿಗೆ ಹಣದಿಂದ ಮೆಟ್ರೊ ನಿರ್ಮಿಸಲಾಗಿದೆ. ನಿನ್ನ ರಾಜ್ಯದವರ ತೆರಿಗೆ ದುಡ್ಡಿನಿಂದಲ್ಲ' ಎಂದು ಜಾಡಿಸಿದ್ದಾರೆ.

ಆದಾಗ್ಯೂ ವಾದ ಮುಂದುವರಿಸಿದ ಹಿಂದಿ ಮಾತನಾಡುತ್ತಿದ್ದಾಕೆ, 'ನೀನು ಭಾರತೀಯಳಲ್ಲವೇ? ಮತ್ತೇಕೆ ನಿನಗೆ ಹಿಂದಿ ಗೊತ್ತಿಲ್ಲ?' ಎಂದು ಪ್ರಶ್ನಿಸಿದ್ದಾರೆ. ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಅಕ್ಕ–ಪಕ್ಕ ಇದ್ದವರೂ ಸೇರಿಕೊಂಡಿದ್ದಾರೆ. ಕೆಲವರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರೂ, ಮೊದಲ ಮಹಿಳೆ ಬಳಸಿದ 'ಬಾಂಗ್ಲಾದೇಶಿ' ಎಂಬ ಪದ ಅಲ್ಲಿದ್ದ ಹಲವು ಪ್ರಯಾಣಿಕರನ್ನು ಕೆರಳಿಸಿದೆ.

ಈ ಘಟನೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿಯೂ ಪರ ವಿರೋಧದ ಚರ್ಚೆ ನಡೆಯುತ್ತಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.