ADVERTISEMENT

ಗುಜರಾತ್‌ನ ಈ ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಗೋಮೂತ್ರ, ಸಗಣಿ ಔಷಧಿಯ ಚಿಕಿತ್ಸೆ

ಸತೀಶ್ ಝಾ
Published 9 ಮೇ 2021, 4:47 IST
Last Updated 9 ಮೇ 2021, 4:47 IST
ರಾಜಾರಾಮ್ ಗೋಶಾಲೆ ಆಶ್ರಮದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರ
ರಾಜಾರಾಮ್ ಗೋಶಾಲೆ ಆಶ್ರಮದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರ   

ಅಹಮದಾಬಾದ್: ಉತ್ತರ ಗುಜರಾತ್‌ನಲ್ಲಿ ತೆರೆಯಲಾಗಿರುವ ನೂತನ ಕೋವಿಡ್-19 ಆರೈಕೆ ಕೇಂದ್ರವು ವೈಶಿಷ್ಟ್ಯದಿಂದ ಗಮನ ಸೆಳೆದಿದ್ದು, ಸೋಂಕಿತರಿಗೆ ಗೋಮೂತ್ರ, ಸಗಣಿ, ಹಾಲು ತುಪ್ಪ ಮತ್ತು ಮೊಸರುಗಳಿಂದ ತಯಾರಿಸಿದ ಆಯುರ್ವೇದ ಔಷಧಿಯೊಂದಿಗೆ ಚಿಕಿತ್ಸೆ ಒದಗಿಸಲಾಗುತ್ತದೆ.

ಬನಸ್ಕಾಂತ ಜಿಲ್ಲೆಯ ದೀಸಾ ತಾಲ್ಲೂಕಿನ ಟೆಟೋಡಾ ಗ್ರಾಮದಲ್ಲಿ ರಾಜಾರಾಮ್ ಗೋಶಾಲೆ ಆಶ್ರಮ ಎಂಬ ಟ್ರಸ್ಟ್‌ನಿಂದ 5,000ಕ್ಕೂ ಹೆಚ್ಚು ಗೋವು ಹೊಂದಿರುವ ವಿಶಾಲವಾದ ಗೋಶಾಲೆಯಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ಅಲೋಪತಿ ಜೊತೆಗೆ 'ಪಂಚಗವ್ಯ' ಆಯುರ್ವೇದ ಚಿಕಿತ್ಸೆಯ ಸೌಲಭ್ಯವನ್ನು ಒದಗಿಸಲಾಗುತ್ತದೆ.

ವೇದಲಕ್ಷಣ ಪಂಚಗವ್ಯ ಆಯುರ್ವೇದ ಕೋವಿಡ್ ಐಸೋಲೇಷನ್ ಕೇಂದ್ರವನ್ನು ಗುರುವಾರದಂದು ಉದ್ಘಾಟಿಸಲಾಯಿತು. ಅಲ್ಲದೆ ಶನಿವಾರ ಒಂದೇ ದಿನದಲ್ಲಿ ರೋಗ ಲಕ್ಷಣಗಳನ್ನು ಹೊಂದಿರುವ 30ಕ್ಕೂ ಹೆಚ್ಚು ಸೋಂಕಿತರು ಇಲ್ಲಿ ದಾಖಲಾಗಿದ್ದಾರೆ.

ಕೋವಿಡ್ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ

100 ಹಾಸಿಗೆಗಳಿಗೆ ನಮಗೆ ಅನುಮತಿ ದೊರಕಿದೆ. ರೋಗಿಗಳ ಆರೈಕೆಗಾಗಿ ನಮ್ಮಲ್ಲಿ ಇಬ್ಬರು ಎಂಬಿಬಿಎಸ್ ವೈದ್ಯರು, ನಾಲ್ಕು ಆಯುರ್ವೇದ ವೈದ್ಯರು ಹಾಗೂ ದಾದಿಯರು ಇದ್ದಾರೆ. ಆರೋಗ್ಯ ಸಮಸ್ಯೆ ಹೊಂದಿರುವ ಸೋಂಕಿತರಿಗೆ ವೈದ್ಯರು ನೆರವಾಗಲಿದ್ದಾರೆ. ಕೋವಿಡ್‌‌ಗೆ ರಾಮಬಾಣವಾದ ಆರ್ಯುರ್ವೇದ ಔಷಧಿಗಳು ನಮ್ಮ ಬಳಿಯಿವೆ. ಆಯುರ್ವೇದವನ್ನು ಉತ್ತೇಜಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಾವು ಗೋ ಮೂತ್ರ, ಸಗಣಿ, ಹಾಲು, ತುಪ್ಪ ಮತ್ತು ಮೊಸರು ಎಂಬ ಐದು ಅಂಶಗಳಿಂದ ಮಾಡಲ್ಪಟ್ಟ ವೇದಲಕ್ಷಣ ಪಂಚಗವ್ಯ ಆಯುರ್ವೇದ ಚಿಕಿತ್ಸೆಯನ್ನು ಒದಗಿಸುತ್ತಿದ್ದೇವೆ ಎಂದು ಟ್ರಸ್ಟಿ ರಾಮ ರತನ್ ದಾಸ್ ತಿಳಿಸಿದ್ದಾರೆ.

100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಪ್ರಾರಂಭಿಸಲು ಜಿಲ್ಲಾಡಳಿತವು ಮೇ 6ರಂದು ಆಶ್ರಮಕ್ಕೆ ಅನುಮತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.