ADVERTISEMENT

ಕಳೆದುಕೊಂಡಿದ್ದ ಏರ್‌ಪಾಡ್‌ ‘ಎಕ್ಸ್‌’ ಮೂಲಕ ಪತ್ತೆ

ಪಿಟಿಐ
Published 6 ಜನವರಿ 2024, 16:28 IST
Last Updated 6 ಜನವರಿ 2024, 16:28 IST
ಜೈನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಏರ್‌ಪಾಡ್‌ ಚಿತ್ರ
ಜೈನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಏರ್‌ಪಾಡ್‌ ಚಿತ್ರ   

ಬೆಂಗಳೂರು: ಮುಂಬೈ ಮೂಲದ ನಿಖಿಲ್‌ ಜೈನ್‌ ಎಂಬವರು ಕೇರಳ ಪ್ರವಾಸದಲ್ಲಿದ್ದ ವೇಳೆ ಕಳೆದುಕೊಂಡಿದ್ದ ದುಬಾರಿ ಬೆಲೆಯ ಏರ್‌ಪಾಡ್‌ ಅನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ ಸಹಾಯ ಪಡೆದು ಪತ್ತೆ ಮಾಡಿರುವ ಅಚ್ಚರಿಯ ಘಟನೆ ನಡೆದಿದೆ.

ಈ ಬಗ್ಗೆ ಸ್ವತಃ ಜೈನ್‌ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

‘ಕೇರಳದ ರಾಷ್ಟ್ರೀಯ ಉದ್ಯಾನವನವೊಂದರ ಬಸ್‌ನಲ್ಲಿ ಏರ್‌ಪಾಡ್‌ ಕಳೆದುಕೊಂಡಿದ್ದೆ. ಇದು ತಿಳಿಯುತ್ತಿದ್ದಂತೆಯೇ ವಾಪಸ್‌ ಅದೇ ಸ್ಥಳಕ್ಕೆ ಬಂದು ನೋಡಿದಾಗ ಬೇರೊಬ್ಬರು ಅದನ್ನು ತೆಗೆದುಕೊಂಡು ಹೋಗಿದ್ದರು. ನಂತರ ಅದರ ಲೊಕೇಷನ್‌ ಜಾಡು ಹಿಡಿದು ಹುಡುಕಾಟ ನಡೆಸಿದಾಗ ಹತ್ತಿರದ ಹೋಟೆಲ್‌ವೊಂದರಲ್ಲಿ ಇರುವ ಸುಳಿವು ಲಭ್ಯವಾಗಿತ್ತು. ಪೊಲೀಸರ ನೆರವಿನೊಂದಿಗೆ ಹೋಟೆಲ್‌ನಲ್ಲಿ ವಿಚಾರಣೆ ನಡೆಸಿದೆ. ಆದರೆ ನಿರ್ದಿಷ್ಟ ಲೊಕೇಷನ್‌ ಲಭ್ಯವಾಗದ ಕಾರಣ ಆ ಪ್ರಯತ್ನವೂ ವಿಫಲವಾಯಿತು’ ಎಂದು ಜೈನ್‌ ತಿಳಿಸಿದ್ದಾರೆ.

ADVERTISEMENT

‘ನಂತರ ಏರ್‌ಪಾಡ್‌ ತೆಗೆದುಕೊಂಡ ವ್ಯಕ್ತಿ ಮಂಗಳೂರು ಮೂಲಕ ಗೋವಾ ತಲುಪಿ ಅಲ್ಲಿನ ಹೋಟೆಲ್‌ವೊಂದರಲ್ಲಿ ಇರುವ ಸುಳಿವು ಲಭ್ಯವಾಯಿತು. ಏರ್‌ಪಾಡ್‌ ವಿವರಗಳೊಂದಿಗೆ ‘ಎಕ್ಸ್‌’ನಲ್ಲಿ ಸಂದೇಶವನ್ನು ಹಂಚಿಕೊಂಡೆ. ನೆಟ್ಟಿಗರೊಬ್ಬರ ಸಹಾಯದಿಂದ ಏರ್‌ಪಾಡ್‌ ಇರುವ ನಿರ್ದಿಷ್ಟ ಲೊಕೇಷನ್‌ ಮತ್ತು ಅದನ್ನು ತೆಗೆದುಕೊಂಡಿದ್ದ ವ್ಯಕ್ತಿಯನ್ನು ಪತ್ತೆ ಮಾಡಲು ಸಾಧ್ಯವಾಯಿತು. ಏರ್‌ಪಾಡ್‌ ತೆಗೆದುಕೊಂಡಿದ್ದ ವ್ಯಕ್ತಿ ಡಿ. 22ರಂದು ಮಡಗಾವ್‌ ಪೊಲೀಸ್‌ ಠಾಣೆಯಲ್ಲಿ ಅದನ್ನು ಕೊಟ್ಟು ತೆರಳಿದ್ದರು. ಸ್ನೇಹಿತರೊಬ್ಬರ ಸಹಾಯದಿಂದ ಅದು ಕಳೆದ ರಾತ್ರಿ ನನ್ನ ಕೈಸೇರಿತು’ ಎಂದು ಅವರು ಹೇಳಿದ್ದಾರೆ.

‘ಎಕ್ಸ್‌’ ಮೂಲಕ ಪತ್ತೇದಾರಿ ಕೆಲಸ ಮಾಡಿದ ಜೈನ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದ ಬಳಕೆದಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ಜೈನ್‌ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದ ಮೂಲ ಸಂದೇಶವು ಈವರೆಗೆ 12 ಲಕ್ಷ ವೀಕ್ಷಣೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.