ADVERTISEMENT

ಕಟ್ಟಡ ಧ್ವಂಸ: ಅರ್ಜಿ ವಿಚಾರಣೆಗೆ ಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 13:12 IST
Last Updated 24 ಅಕ್ಟೋಬರ್ 2024, 13:12 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಕಟ್ಟಡಗಳ ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನೀಡಿದ್ದ ಸೂಚನೆಗಳನ್ನು ಉತ್ತರಾಖಂಡ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಅಧಿಕಾರಿಗಳಲು ಉಲ್ಲಂಘಿಸಿದ್ದಾರೆ ಎಂಬ ದೂರು ಇರುವ ಅರ್ಜಿಯೊಂದನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿತು.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಕೆ. ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರು ಇದ್ದ ತ್ರಿಸದಸ್ಯ ಪೀಠವು, ಅಧಿಕಾರಿಗಳಿಂದ ನಡೆದಿದೆ ಎನ್ನಲಾದ ಕೃತ್ಯಕ್ಕೆ ನೇರವಾಗಿ ಸಂಬಂಧಿಸಿಲ್ಲದ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಹೇಳಿತು.

ADVERTISEMENT

‘ಧ್ವಂಸ ಕಾರ್ಯಾಚರಣೆಯಿಂದ ತೊಂದರೆಗೆ ಒಳಗಾದವರು ನ್ಯಾಯಾಲಯದ ಮುಂದೆ ಬರಲಿ’ ಎಂದು ಪೀಠ ಹೇಳಿತು.

ತನ್ನ ಅನುಮತಿ ಇಲ್ಲದೆ ಕಟ್ಟಡ ಧ್ವಂಸ ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದರೆ ಹರಿದ್ವಾರ, ಜೈಪುರ ಮತ್ತು ಕಾನ್ಪುರದಲ್ಲಿ ಅಧಿಕಾರಿಗಳು ನ್ಯಾಯಾಲಯದ ಸೂಚನೆ ಮೀರಿ ಧ್ವಂಸ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.

ಒಂದು ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ ಎಂದು ವಕೀಲರು ಆರೋಪಿಸಿದರು.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಪಾದಚಾರಿ ರಸ್ತೆಯ ಅತಿಕ್ರಮಣವನ್ನು ಮಾತ್ರ ತೆರವು ಮಾಡಲಾಗಿದೆ ಎಂದು ತಿಳಿಸಿದರು. ಅರ್ಜಿದಾರರು ಮೂರನೆಯ ವ್ಯಕ್ತಿ, ಅವರಿಗೆ ವಾಸ್ತವ ಗೊತ್ತಿಲ್ಲ ಎಂದು ಹೇಳಿದರು. ‌ಮಾಧ್ಯಮ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ನಟರಾಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.