ADVERTISEMENT

ಪ್ರಾಮಾಣಿಕ CJI ಅವರು ಪ್ರಧಾನಿಯನ್ನು ಮನೆಗೆ ಆಹ್ವಾನಿಸಿದ್ದು ದುರದೃಷ್ಟಕರ: ಕಪಿಲ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 21:02 IST
Last Updated 12 ಸೆಪ್ಟೆಂಬರ್ 2024, 21:02 IST
<div class="paragraphs"><p>ಸಿಜೆಐ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ</p></div>

ಸಿಜೆಐ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

   

(ಚಿತ್ರ ಕೃಪೆ: X/@narendramodi)

ನವದೆಹಲಿ: ‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದು ದುರದೃಷ್ಟಕರ. ಅದನ್ನು ತಪ್ಪಿಸಬಹುದಿತ್ತು’ ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ADVERTISEMENT

ಸಿಜೆಐ ಮನೆಯಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಮೋದಿ ಅವರು ಪಾಲ್ಗೊಂಡದ್ದಕ್ಕೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಅಧ್ಯಕ್ಷರೂ ಆಗಿರುವ ಸಿಬಲ್‌ ಪ್ರತಿಕ್ರಿಯಿಸಿ, ‘ಅಂತಹ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಅವರು ಆಸಕ್ತಿ ತೋರಿಸಬಾರದಿತ್ತು’ ಎಂದಿದ್ದಾರೆ.

‘ಡಿ.ವೈ ಚಂದ್ರಚೂಡ್‌ ಅವರು ಪ್ರಾಮಾಣಿಕ ವ್ಯಕ್ತಿ ಎಂಬುದನ್ನು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳಬಲ್ಲೆ. ಆದರೆ, ಅವರ ನಿವಾಸದಲ್ಲಿ ನಡೆದ ಪೂಜೆಯಲ್ಲಿ ಪ್ರಧಾನಿ ಪಾಲ್ಗೊಂಡ ವಿಡಿಯೊ ನೋಡಿದಾಗ ಅಚ್ಚರಿ ಉಂಟಾಯಿತು. ಸಾರ್ವಜನಿಕ ಸೇವೆಯಲ್ಲಿರುವವರು, ವಿಶೇಷವಾಗಿ ಉನ್ನತ ಹುದ್ದೆಯಲ್ಲಿರುವವರು ಖಾಸಗಿ ಕಾರ್ಯಕ್ರಮವನ್ನು ಪ್ರಚಾರ ಮಾಡಬಾರದು. ಈ ಕಾರ್ಯಕ್ರಮದ ಫೋಟೊ, ವಿಡಿಯೊ ಎಲ್ಲೆಡೆ ಹರಿದಾಡಲಿದೆ ಎಂಬುದು ಸಿಜೆಐಗೆ ತಿಳಿದಿರಲಿಕ್ಕಿಲ್ಲ ಎಂಬ ಬಗ್ಗೆ ನನಗೆ ಖಾತ್ರಿ ಇದೆ’ ಎಂದು ಹೇಳಿದ್ದಾರೆ.

‘ಅಹಿತಕರ ಸಂದೇಶ’: ಸಿಜೆಐ ಮನೆಗೆ ಪ್ರಧಾನಿ ಅವರ ಭೇಟಿ ‘ಅಹಿತಕರ’ ಸಂದೇಶವನ್ನು ರವಾನಿಸುತ್ತದೆ ಎಂದು ಆರ್‌ಜೆಡಿ ಸಂಸದ ಮನೋಜ್‌ ಝಾ ಹೇಳಿದ್ದಾರೆ. 

‘ಸ್ವಾತಂತ್ರ್ಯವು ಕೇವಲ ಸೈದ್ಧಾಂತಿಕವಾಗಿರಬಾರದು, ಅದು ಗೋಚರಿಸುವಂತಿರಬೇಕು. ಗಣಪತಿ ಪೂಜೆ ತುಂಬಾ ವೈಯಕ್ತಿಕ ವಿಷಯ. ನೀವು ಕ್ಯಾಮರಾದೊಂದಿಗೆ ಅಲ್ಲಿಗೆ ಹೋಗುತ್ತೀರಿ ಎಂದಾದರೆ ಅದು ರವಾನಿಸುವ ಸಂದೇಶವು ಇನ್ನೊಬ್ಬರಿಗೆ ಅಹಿತಕರವಾಗಿರುತ್ತದೆ’ ಎಂದಿದ್ದಾರೆ.

'ಇಫ್ತಾರ್‌ ಕೂಟಗಳಲ್ಲಿ ಪ್ರಧಾನಿ ಅವರ ಉಪಸ್ಥಿತಿಯನ್ನು ಶ್ಲಾಫಿಸುವ ಮತ್ತು ಪ್ರೋತ್ಸಾಹಿಸುವ ಅದೇ ಮಂದಿ, ಮೋದಿ ಅವರು ಸಿಜೆಐ ಮನೆಯಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಪಾಲ್ಗೊಂಡದ್ದನ್ನು ಟೀಕಿಸುತ್ತಾರೆ. ಭಾರತದಾದ್ಯಂತ ಕೋಟ್ಯಂತರ ಭಕ್ತರಿಂದ ಪೂಜಿಸಲ್ಪಡುವ ದೇವರ ಮುಂದೆ ಕಾರ್ಯಾಂಗ ಮತ್ತು ನ್ಯಾಯಾಂಗವು ಪ್ರಾರ್ಥನೆ ಮಾಡುವ ದೃಶ್ಯವು ಜಾತ್ಯತೀತತೆಯ ನಿಜವಾದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಹೇಳಿದ್ದಾರೆ.

‘ಪ್ರಜಾಪ್ರಭುತ್ವದ ವಿವಿಧ ಸ್ತಂಭಗಳು ಪರಸ್ಪರ ಭೇಟಿಯಾಗಬಾರದೇ, ಅವರು ಶತ್ರುಗಳಾಗಿರಬೇಕೇ, ಪರಸ್ಪರ ಮಾತನಾಡಬಾರದೇ, ಅವರು ಹಸ್ತಲಾಘವ ಮಾಡಬಾರದೇ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಪ್ರಶ್ನಿಸಿದ್ದಾರೆ.

‘ಪ್ರಧಾನಿ ಅವರು ಸಿಜೆಐ ಭೇಟಿ ಮಾಡಿದ್ದಕ್ಕೆ ವಿಪಕ್ಷಗಳು ಆಕ್ಷೇಪ ಎತ್ತಿರುವುದು ನನಗೆ ಆಶ್ಚರ್ಯ ಉಂಟುಮಾಡಿದೆ. ಆದರೆ ರಾಹುಲ್ ಗಾಂಧಿ ಅವರು ಅಮೆರಿಕ ಭೇಟಿಯಲ್ಲಿ ಇಲ್ಹಾನ್‌ ಒಮರ್‌ (ಭಾರತ ವಿರೋಧಿ ಧೋರಣೆ ಹೊಂದಿರುವ ಅಮೆರಿಕದ ಸಂಸದೆ) ಅವರನ್ನು ಭೇಟಿಯಾಗುವುದಕ್ಕೆ ನಿಮ್ಮ ಯಾವುದೇ ಅಭ್ಯಂತರವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಸಂಜಯ್ ರಾವುತ್
ವಿಚಾರಣೆಯಿಂದ ಹಿಂದೆ ಸರಿಯಲಿ: ರಾವುತ್‌‌
ಮಹಾರಾಷ್ಟ್ರ ವಿಧಾನಸಭೆಯ ಶಾಸಕರ ಅನರ್ಹತೆಗೆ ಸಂಬಂಧಿಸಿದ ಪ್ರಕರಣದ ಅರ್ಜಿಗಳ ವಿಚಾರಣೆಯಿಂದ ಸಿಜೆಐ ಡಿ.ವೈ ಚಂದ್ರಚೂಡ್ ಹಿಂದೆ ಸರಿಯಬೇಕು ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಂವಿಧಾನದ ರಕ್ಷಕರು ರಾಜಕಾರಣಿಗಳನ್ನು ಭೇಟಿಯಾದಾಗ ಜನರ ಮನಸ್ಸಿನಲ್ಲಿ ಅನುಮಾನಗಳು ಮೂಡುತ್ತವೆ’ ಎಂದಿದ್ದಾರೆ.  ‘ಶಾಸಕರ ಅನರ್ಹತೆ ಪ್ರಕರಣಗಳ ವಿಚಾರಣೆಯಿಂದ ಸಿಜೆಐ ಹಿಂದೆ ಸರಿಯಬೇಕು. ಏಕೆಂದರೆ ಪ್ರಧಾನ ಮಂತ್ರಿಯೊಂದಿಗಿನ ಅವರ ಸಂಬಂಧ ಏನು ಎಂಬುದು ಜಗಜ್ಜಾಹೀರುಗೊಂಡಿದೆ. ಅವರು ನಮಗೆ ನ್ಯಾಯ ಒದಗಿಸಬಲ್ಲರೇ’ ಎಂದು ಪ್ರಶ್ನಿಸಿದ್ದಾರೆ.  ‘ನಮ್ಮ ಪ್ರಕರಣವು ಸಿಜೆಐ ಮುಂದಿದೆ. ಶಾಸಕರ ಅನರ್ಹತೆ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಕಕ್ಷಿದಾರ ಆಗಿರುವುದರಿಂದ ಮತ್ತು ಕೇಂದ್ರ ಸರ್ಕಾರವು ಮೋದಿ ಅವರ ನೇತೃತ್ವದಲ್ಲಿರುವುದರಿಂದ ನಮಗೆ ನ್ಯಾಯ ಸಿಗುವ ಬಗ್ಗೆ ಅನುಮಾನವಿದೆ’ ಎಂದಿದ್ದಾರೆ.
ಹಿಂದೂಗಳ ಭಾವನೆ ಮತ್ತು ನಮ್ಮ ಹಬ್ಬಗಳ ಬಗ್ಗೆ ಟೀಕೆ ಮಾಡುತ್ತಿರುವ ವಿರೋಧ ಪಕ್ಷದ ನಾಯಕರ ನಿಲುವನ್ನು ಖಂಡಿಸುತ್ತೇನೆ.
–ಪೀಯೂಷ್‌ ಗೋಯಲ್‌, ಕೇಂದ್ರ ಸಚಿವ
‘ಇಂತಹ ಘಟನೆಯನ್ನು (ಪ್ರಧಾನಿ ಸಿಜೆಐ ಮನೆಗೆ ಭೇಟಿ ನೀಡುವುದು) ಕೇಳಿರಲಿಲ್ಲ. ಆದ್ದರಿಂದ ಅಚ್ಚರಿ ಉಂಟಾಯಿತು. ಆದರೆ, ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಸಿಜೆಐ ಅವರು ಪ್ರಧಾನಿ ಅವರನ್ನು ಆಹ್ವಾನಿಸುವುದಕ್ಕೂ ಮುನ್ನ ಸಾಕಷ್ಟು ಯೋಚಿಸಿರಬಹುದು.
–ಸುಪ್ರಿಯಾ ಸುಳೆ, ಎನ್‌ಸಿಪಿ (ಶರದ್‌ ಪವಾರ್‌ ಬಣ) ಸಂಸದೆ
‘ಸಿಜೆಐ ಮನೆಯಲ್ಲಿ ನಡೆದ ಗಣಪತಿ ಪೂಜೆ ಮತ್ತು ಆರತಿ ದೇಶದಾದ್ಯಂತ ಅನೇಕರ ನಿದ್ದೆಗೆಡಿಸಿದೆ. ಪ್ರಧಾನಿ ಅವರು ಅಲ್ಲಿ ಸ್ನೇಹಕೂಟಕ್ಕೆ ತೆರಳಿದ್ದಲ್ಲ. ಶ್ರದ್ಧೆಯಿಂದ ನಡೆದ ಗಣಪತಿ ಪೂಜೆಯನ್ನೂ ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ.
–ಬಿ.ಎಲ್.ಸಂತೋಷ್, ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ)
ಸಿಜೆಐ ಅವರ ವಿಶ್ವಾಸಾರ್ಹತೆಯನ್ನು ಹಾಳುಮಾಡುವ ವಿಪಕ್ಷಗಳ ‘ನಿರ್ಲಕ್ಷ್ಯದ ಹೇಳಿಕೆ’ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ. ತೀರ್ಪುಗಳು ತಮ್ಮ ಪರವಾಗಿ ಬಂದಾಗ, ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯನ್ನು ಹೊಗಳುತ್ತವೆ. ಆದರೆ ತಮಗೆ ವಿರುದ್ಧವಾದ ಬೆಳವಣಿಗೆ ನಡೆದಾಗ ನ್ಯಾಯಾಂಗವು ರಾಜಿಯಾಗಿದೆ ಎಂದು ಆರೋಪಿಸುತ್ತವೆ.
–ಮಿಲಿಂದ್ ದೇವ್ರಾ, ಶಿವಸೇನಾ (ಶಿಂದೆ ಬಣ) ರಾಜ್ಯಸಭಾ ಸದಸ್ಯ
ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ. ಮದುವೆ ಮತ್ತು ಇತರ ಶುಭ ಸಮಾರಂಭಗಳಲ್ಲಿ ನ್ಯಾಯಾಂಗದವರು ಮತ್ತು ರಾಜಕಾರಣಿಗಳು ಹಲವು ಸಲ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನು ದೂಷಿಸುವುದು ನಾಚಿಕೆಗೇಡಿನ ಸಂಗತಿ.
–ಶೆಹಜಾದ್‌ ಪೂನಾವಾಲಾ, ಬಿಜೆಪಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.