ADVERTISEMENT

‘ದುರಹಂಕಾರಿ’ಗಳನ್ನು ರಾಮನು 241 ಸ್ಥಾನಗಳಿಗೆ ನಿಲ್ಲಿಸಿದ: ಇಂದ್ರೇಶ್‌ ಕುಮಾರ್

ಪಿಟಿಐ
Published 14 ಜೂನ್ 2024, 14:19 IST
Last Updated 14 ಜೂನ್ 2024, 14:19 IST
ಇಂದ್ರೇಶ್‌ ಕುಮಾರ್
ಇಂದ್ರೇಶ್‌ ಕುಮಾರ್   

ಜೈ‍‍‍ಪುರ: ಲೋಕಸಭಾ ಚುನಾವಣೆ ಅವಧಿಯಲ್ಲಿ ಆಡಳಿತಾರೂಢ ಬಿಜೆಪಿ ತೋರಿದ ‘ದುರಹಂಕಾರ’ ಮತ್ತು ಇಂಡಿಯಾ ಮೈತ್ರಿಕೂಟದ ‘ರಾಮ ವಿರೋಧಿ’ ಧೋರಣೆಯನ್ನು ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್‌ ಕುಮಾರ್‌ ಅವರು ಟೀಕಿಸಿದ್ದಾರೆ. 

ಜೈಪುರ ಸಮೀಪದ ಕಾನೋತಾದಲ್ಲಿ ಆಯೋಜಿಸಿದ್ದ ‘ರಾಮರಥ ಅಯೋಧ್ಯೆ ಯಾತ್ರಾ ದರ್ಶನ್ ಪೂಜಾ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಸರು ಹೇಳದೆಯೇ ಬಿಜೆಪಿ ಹಾಗೂ ವಿರೋಧ ಪಕ್ಷಗಳ ಧೋರಣೆಯನ್ನು ದೂರಿದರು. ಲೋಕಸಭಾ ಚುನಾವಣಾ ಫಲಿತಾಂಶವು ಈ ಪಕ್ಷಗಳ ವರ್ತನೆಯನ್ನು ಪ್ರತಿಬಿಂಬಿಸುತ್ತವೆ ಎಂದರು. 

‘ಶ್ರೀರಾಮನ ಮೇಲೆ ಭಕ್ತಿ ತೋರಿದ, ಆದರೆ ‘ದುರಹಂಕಾರಿ’ಯಾದ ಪಕ್ಷವನ್ನು ರಾಮನು 241 ಸ್ಥಾನಗಳಲ್ಲಿ ನಿಲ್ಲಿಸಿದ. ಆ ಪಕ್ಷಕ್ಕೆ ಅತಿಹೆಚ್ಚು ಸ್ಥಾನಗಳು ಸಿಗುವಂತೆ ಮಾಡಿದ’ ಎಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದರು.

ADVERTISEMENT

‘ಆದರೆ, ರಾಮನ ಮೇಲೆ ನಂಬಿಕೆಯಿಲ್ಲದವರು ಒಟ್ಟಾಗಿ 234 ಸ್ಥಾನಗಳಿಗೆ ನಿಂತುಬಿಟ್ಟರು’ ಎಂದು ಇಂಡಿಯಾ ಮೈತ್ರಿಕೂಟವನ್ನು ಉಲ್ಲೇಖಿಸಿ ನುಡಿದರು. 

‘ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಕಾನೂನು ಹೇಗಿದೆ ಎಂಬುದನ್ನು ನೋಡಿ; ರಾಮನ ಪೂಜೆ ಮಾಡಿದವರು ಕ್ರಮೇಣ ಅಹಂಕಾರದತ್ತ ತಿರುಗಿದರು. ಚುನಾವಣೆಯಲ್ಲಿ ಆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಸ್ವಂತ ಬಲದಿಂದ ಅಧಿಕಾರ ನಡೆಸಲು ಬೇಕಾದಷ್ಟು ಮತಗಳನ್ನು ದೇವನು ನೀಡಲಿಲ್ಲ. ಅವರ ದುರಹಂಕಾರಿ ಧೋರಣೆಯೇ ಅದಕ್ಕೆ ಕಾರಣ’ ಎಂದರು.

‘ರಾಮನನ್ನು ವಿರೋಧಿಸಿದ ಯಾರಿಗೂ ಅಧಿಕಾರ ಸಿಗಲಿಲ್ಲ. ಅವರು ಪರಸ್ಪರ ಕೈಜೋಡಿಸಿದರೂ, ಎರಡನೇ ಸ್ಥಾನಕ್ಕೆ ಸೀಮಿತಗೊಂಡರು. ದೇವರ ನ್ಯಾಯವು ನೈಜ ಮತ್ತು ಆನಂದದಾಯಕವಾಗಿದೆ’ ಎಂದು ಅಭಿಪ್ರಾಯಪಟ್ಟರು. ‘ಭಗವಾನ್ ರಾಮನು ಯಾರನ್ನೂ ಗೋಳಾಡುವಂತೆ ಮಾಡುವುದಿಲ್ಲ. ಎಲ್ಲರಿಗೂ ನ್ಯಾಯವನ್ನು ನೀಡುತ್ತಾನೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.