ನವದೆಹಲಿ: ಮರಾಠ ಸಮುದಾಯದ ಬೆಂಬಲದೊಂದಿಗೆ ಅಧಿಕಾರ ಅನುಭವಿಸಿದವರು ಆ ಸಮುದಾಯಕ್ಕೆ ಏನನ್ನೂ ಮಾಡಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಶನಿವಾರ ಹೇಳಿದ್ದಾರೆ.
ಎನ್‌ಸಿಪಿ–ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಅವರು, ಮೀಸಲಾತಿ ವಿಚಾರವಾಗಿ ಸಮುದಾಯಗಳ ನಡುವೆ ಬಿರುಕು ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಶಿಂದೆ ಈ ಹೇಳಿಕೆ ನೀಡಿದ್ದಾರೆ.
ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರವು ಹಿಂದುಳಿದ ವರ್ಗಗಳು ಮತ್ತು ಮರಾಠಾ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ವಿಭಿನ್ನ ಭರವಸೆಗಳನ್ನು ನೀಡಿದೆ ಎಂದು ಪವಾರ್ ಆರೋಪಿಸಿದ್ದರು.
ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರ ರಾಜಧಾನಿಗೆ ಬಂದಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿಂದೆ, ಪವಾರ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. 'ನಾವು ಯಾವುದೇ ಹೇಳಿಕೆ ನೀಡಿದ್ದರೂ, ಅದನ್ನು ಬಹಿರಂಗವಾಗಿಯೇ ನೀಡಿದ್ದೇವೆ' ಎಂದು ಪ್ರತಿಪಾದಿಸಿದ್ದಾರೆ.
'ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಹಿಂದಿನ ಸಿಎಂ ದೇವೇಂದ್ರ ಫಡಣವೀಸ್ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ನಂತರ ಅಧಿಕಾರಕ್ಕೇರಿದ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ತಿಳಿಸಿದ್ದಾರೆ.
'ನಾವು ಮತ್ತೆ ಅಧಿಕಾರಕ್ಕೇರಿದಾಗ ಮೀಸಲಾತಿ ನೀಡಿದ್ದೇವೆ. ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿ, ಮೀಸಲಾತಿಗೆ ಅರ್ಹತೆ ಉಳ್ಳವರಿಗೆ ಉದ್ಯೋಗ ನೀಡಿದ್ದೇವೆ. ಈ ಹಿಂದೆ ಅಧಿಕಾರದಲ್ಲಿದ್ದ ಎಂವಿಎ ಸರ್ಕಾರ, ಮೀಸಲಾತಿ ಜಾರಿ ಮಾಡುವ ಧೈರ್ಯ ತೋರಿರಲಿಲ್ಲ' ಎಂದು ಟೀಕಿಸಿದ್ದಾರೆ.
ಹಾಗೆಯೇ, ತಮ್ಮ ಸರ್ಕಾರವು ಹಿಂದುಳಿದ ವರ್ಗಗಳಿಗೆ ತೊಂದರೆಯಾಗದಂತೆ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪವಾರ್ ವಿರುದ್ಧ ಚಾಟಿ ಬೀಸಿದ ಮುಖ್ಯಮಂತ್ರಿ, ಮೀಸಲಾತಿ ವಿಚಾರವಾಗಿ ಪಾರದರ್ಶಕ ಹಾಗೂ ಸ್ಪಷ್ಟ ನಿಲುವು ಹೊಂದಿರಬೇಕು. ರಾಜಕೀಯ ಲಾಭಕ್ಕಾಗಿ ನಿರ್ಧಿಷ್ಟ ಬಣದ ಪರ ನಿಲ್ಲಬಾರದು ಎಂದಿದ್ದಾರೆ. 'ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಯಾವುದೇ ಸಮುದಾಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು' ಎಂದು ತಿವಿದಿದ್ದಾರೆ.
ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಎನ್‌ಸಿಪಿ–ಎಸ್‌ಪಿ ಪಕ್ಷಗಳು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಆಘಾಡಿ ಮೈತ್ರಿಕೂಟದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.