ನವದೆಹಲಿ: ದೇಶಭಕ್ತಿಯ ಭಾವನೆಯನ್ನು ಅಭಿವ್ಯಕ್ತಗೊಳಿಸುವ ಜನಪ್ರಿಯ ‘ಸಾರೇ ಜಹಾಂ ಸೇ ಅಚ್ಚಾ...’ ಗೀತೆಯನ್ನು ರಚಿಸಿದ್ದ ಕವಿ ಇಕ್ಬಾಲ್ ಅವರನ್ನು ಕುರಿತ ಪಠ್ಯವನ್ನು ದೆಹಲಿ ವಿಶ್ವವಿದ್ಯಾಲಯವು ಬಿ.ಎ ಪದವಿ ಪಠ್ಯಕ್ರಮದಿಂದ ಕೈಬಿಡಲು ತೀರ್ಮಾನಿಸಿದೆ.
ಕವಿ ಇಕ್ಬಾಲ್ ಅವರು ಅವಿಭಜಿತ ಭಾರತದ ಸಿಯಾಲ್‌ಕೋಟ್‌ನಲ್ಲಿ 1877ರಲ್ಲಿ ಜನಿಸಿದ್ದರು. ‘ಸಾರೇ ಜಹಾಂ ಸೇ ಅಚ್ಚಾ.. ಹಿಂದೂಸ್ತಾನ್ ಹಮಾರಾ.. ಹಮಾರಾ’ ಗೀತೆಯ ಕರ್ತೃವಾಗಿದ್ದು, ಈ ಗೀತೆಯ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ.
ಬಿ.ಎ ಪದವಿಯ 6ನೇ ಸೆಮಿಸ್ಟರ್‌ನ ರಾಜ್ಯಶಾಸ್ತ್ರ ಪಠ್ಯಕ್ರಮದಲ್ಲಿ ‘ಮಾಡರ್ನ್ ಇಂಡಿಯಾ ಪೊಲಿಟಿಕಲ್ ಥಾಟ್’ ಶೀರ್ಷಿಕೆಯಡಿ ಇದ್ದ ಇಕ್ಬಾಲ್ ಅವರನ್ನು ಕುರಿತ ಪಠ್ಯ ಕೈಬಿಡುವ ನಿರ್ಣಯವನ್ನು ದೆಹಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯು ಶುಕ್ರವಾರ ಅಂಗೀಕರಿಸಿತು.
ವಿಶ್ವವಿದ್ಯಾಲಯದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕುಲಪತಿ ಯೋಗೇಶ್ ಸಿಂಗ್ ಅವರು, ‘ದೇಶವನ್ನು ವಿಭಜಿಸುವ ಚಿಂತನೆಗೆ ಅಡಿಗಲ್ಲು ಹಾಕಿದವರ ವಿವರ ಪಠ್ಯಕ್ರಮದಲ್ಲಿ ಇರಕೂಡದು’ ಎಂದು ಪ್ರತಿಪಾದಿಸಿದರು.
‘ಇಕ್ಬಾಲ್ ಅವರು ಪಾಕಿಸ್ತಾನದ ಕವಿ. ಮುಸ್ಲಿಂ ಲೀಗ್ ಮತ್ತು ಪಾಕಿಸ್ತಾನದ ಪರ ಜನಾಂದೋಲನವನ್ನು ಬೆಂಬಲಿಸಿಯೂ ಅವರು ಪದ್ಯವನ್ನು ಬರೆದಿದ್ದಾರೆ. ದೇಶವನ್ನು ವಿಭಜಿಸಿ, ಪಾಕಿಸ್ತಾನ ರಾಷ್ಟ್ರ ರಚಿಸಬಹುದು ಎಂಬ ಸಲಹೆಯನ್ನು ಮೊದಲಿಗೆ ನೀಡಿದ್ದೇ ಕವಿ ಇಕ್ಬಾಲ್. ವಿದ್ಯಾರ್ಥಿಗಳು ಅವರ ಬಗ್ಗೆ ಅಧ್ಯಯನ ಮಾಡುವ ಬದಲು, ದೇಶದ ಸಾಧಕರನ್ನು ಕುರಿತು ಅಧ್ಯಯನ ಮಾಡಲಿ‘ ಎಂದು ಕುಲಪತಿ ಹೇಳಿದರು.
‘ಶೈಕ್ಷಣಿಕ ಮಂಡಳಿ ಸಭೆಯು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಿ, 15 ಗಂಟೆ ಕಾಲ ಚರ್ಚಿಸಿತು. ಅಂತಿಮವಾಗಿ ಪಠ್ಯವನ್ನು ಕೈಬಿಡುವ ಕುರಿತ ಕುಲಪತಿ ಮಂಡಿಸಿದ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿತು’ ಎಂದು ವಿ.ವಿಯ ಹೇಳಿಕೆ ತಿಳಿಸಿದೆ.
‘ಶೈಕ್ಷಣಿಕ ಮಂಡಳಿ ಸಭೆಯು ಶುಕ್ರವಾರ ಮಧ್ಯರಾತ್ರಿ 1.20ಕ್ಕೆ ಮುಗಿಯಿತು. ಪದವಿ ಹಂತದ ವಿವಿಧ ಕೋರ್ಸ್‌ಗಳ ನಾಲ್ಕು, ಐದು ಮತ್ತು ಆರನೇ ಸೆಮಿಸ್ಟರ್ ಪಠ್ಯಕ್ರಮ ಪರಿಷ್ಕರಿಸುವ ಕಾರ್ಯಸೂಚಿಗಳಿಗೆ ಅಂಗೀಕಾರ ನೀಡಿತು’ ಎಂದು ಹೇಳಿಕೆಯು ವಿವರಿಸಿದೆ.
ತತ್ವಶಾಸ್ತ್ರ ಪಠ್ಯಕ್ರಮಗಳಿಗೆ ಅನುಮೋದನೆ: ಇದೇ ಸಂದರ್ಭದಲ್ಲಿ ತತ್ವಶಾಸ್ತ್ರ ವಿಭಾಗವು ಬಿ.ಎ ಪದವಿ ಕೋರ್ಸ್‌ಗೆ ಪರಿಚಯಿಸಲು ಸೂಚಿಸಿ ಮಂಡಿಸಿದ ಪಠ್ಯಕ್ರಮಗಳಿಗೂ ಅವಿರೋಧವಾಗಿ ಅನುಮೋದನೆ ನೀಡಿತು. ವಿವಿಧ ಪದವಿ ಕೋರ್ಸ್‌ಗಳ ತತ್ವಶಾಸ್ತ್ರ ವಿಭಾಗದಲ್ಲಿ ‘ಫಿಲಾಸಫಿ ಆಫ್ ಡಾ.ಅಂಬೇಡ್ಕರ್’, ‘ಫಿಲಾಸಫಿ ಆಫ್ ಮಹಾತ್ಮಗಾಂಧಿ’, ‘ಫಿಲಾಸಫಿ ಆಫ್ ಸ್ವಾಮಿ ವಿವೇಕಾನಂದ’ ಸೇರಿವೆ.
ಈ ಪಠ್ಯಗಳಿಗೆ ಅನುಮೋದನೆ ನೀಡುವ ಜೊತೆಗೆ, ಸಾವಿತ್ರಿಬಾಯಿ ಫುಲೆ ಅವರನ್ನು ಕುರಿತ ಅಡಕವನ್ನು ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸಲು ಚಿಂತನೆ ನಡೆಸಬೇಕು ಎಂದು ಕುಲಪತಿ ಅವರು ವಿಭಾಗದ ಮುಖ್ಯಸ್ಥರಿಗೆ ಸಲಹೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.