ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇವಾಲಯಕ್ಕೆ ಬುಧವಾರ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ಮಂಡಲ ಪೂಜೆಗೆ ಸಾಕ್ಷಿಯಾದರು.
ದೇವಾಲಯದ ತಂತ್ರಿ (ಮುಖ್ಯ ಅರ್ಚಕ) ಕಂಡರಾರು ಮಹೇಶ್ ಮೋಹನಾರು ಅವರ ನೇತೃತ್ವದಲ್ಲಿ ಅಯ್ಯಪ್ಪ ದೇವರ ವಿಗ್ರಹಕ್ಕೆ ‘ತಂಗ ಅಂಗಿ’ಯ (ಚಿನ್ನಾಭರಣ) ಅಲಂಕಾರ ಮಾಡಿ, ಮಂಡಲ ಪೂಜೆಯನ್ನು ನೆರವೇರಿಸಲಾಯಿತು. ‘ತಂಗ ಅಂಗಿ’ಯನ್ನು ಮಂಗಳವಾರ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಗಿತ್ತು.
'ಕಳಶಾಭಿಷೇಕ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳು ನಡೆದವು. ನಾಗಾಲ್ಯಾಂಡ್ ರಾಜ್ಯಪಾಲ ಎಲ್. ಗಣೇಶ್, ಕೇರಳದ ಮುಜರಾಯಿ ಸಚಿವ ಕೆ. ರಾಧಾಕೃಷ್ಣನ್, ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಉಪಸ್ಥಿತರಿದ್ದರು’ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಂತಿದ್ದರು ಎಂದು ಮೂಲಗಳು ತಿಳಿಸಿವೆ.
‘ಕೆಲವು ದಿನಗಳಿಂದ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದೆ. ಮಕರವಿಳಕ್ಕು ಸಂದರ್ಭದಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಸಚಿವ ರಾಧಾಕೃಷ್ಣನ್ ಹೇಳಿದ್ದಾರೆ.
ಮಂಡಲ ಪೂಜೆಯ ಬಳಿಕ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಇದೇ 30ರಂದು ಮತ್ತೆ ತೆರೆಯಲಿದೆ.
ಅಯ್ಯಪ್ಪ ದೇವಾಲಯದಲ್ಲಿ ಈ ವರ್ಷದ ಮಂಡಲ ಋತುವಿನ 41 ದಿನಗಳ ಅವಧಿಯಲ್ಲಿ ಒಟ್ಟು ₹241.71 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ₹18.72 ಕೋಟಿ ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹222.98 ಕೋಟಿ ಆದಾಯ ಸಂಗ್ರಹವಾಗಿತ್ತು ಎಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.