ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕಳೆದ ವಾರ ವ್ಯಕ್ತಿಯೊಬ್ಬರು ಬೆದರಿಕೆಯ ಕರೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ‘ಪ್ರಜ್ಞಾ ಸಿಂಗ್ ಅವರಿಗೆ ಕಳೆದ ವಾರ ಕರೆ ಮಾಡಿದ್ದ ವ್ಯಕ್ತಿಗೆ ದುಬೈ ನಂಟು ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಕರೆ ಮಾಡಿದ್ದ ವ್ಯಕ್ತಿಯು, ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಿರುವ ತಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ, ಆತಉಗ್ರ ದಾವೂದ್ ಇಬ್ರಾಹಿಂನ ಸೋದರ ಇಕ್ಬಾಲ್ ಕಸ್ಕರ್‌ನ ಮನುಷ್ಯ ಎಂದು ಪರಿಚಯಿಸಿಕೊಂಡಿದ್ದ ಎಂದು ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಈ ಕರೆಯು ದುಬೈನಿಂದಲೇ ಬಂದಿದೆಯೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಪ್ರಜ್ಞಾ ಸಿಂಗ್ ಅವರಿಗೆ ಬಂದಿದ್ದ ಸಂಖ್ಯೆಯಿಂದಲೇ ಇತ್ತೀಚೆಗೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಅವರ ಸೊಸೆ ಹಾಗೂ ಬಿಜೆಪಿ ನಾಯಕಿ ಅಪರ್ಣ ಯಾದವ್ ಅವರಿಗೂ ಬೆದರಿಕೆ ಕರೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.