ಛಪರಾ (ಬಿಹಾರ): ಬಿಹಾರದ ಸರಣ್ ಜಿಲ್ಲೆಯಲ್ಲಿ ಎಮ್ಮೆ ಕಳವು ಮಾಡುತ್ತಿದ್ದರು ಎನ್ನುವ ಶಂಕೆ ಮೇಲೆ ಜನರ ಗುಂಪೊಂದು ಮೂವರನ್ನು ಬಡಿದು ಕೊಂದಿರುವುದುಶುಕ್ರವಾರ ನಡೆದಿದೆ.
ಮೃತರನ್ನು ರಾಜುನಾಥ್, ಬಿದೇಶ್‌ನಾಥ್ ಹಾಗೂ ನೌಶಾದ್ ಖುರೇಷಿ ಎಂದು ಗುರುತಿಸಲಾಗಿದೆ. ಪೈಗಂಬರಪುರ್ ಗ್ರಾಮಕ್ಕೆ ಸೇರಿದ ಇವರೆಲ್ಲರೂ ಪಿಠೌರಿ ನಂದಾಲಾಲ್ ಗ್ರಾಮದಲ್ಲಿ ಟ್ರಕ್‌ನಲ್ಲಿ ತೆರಳುತ್ತಿದ್ದರು. ಬೆಳಗಿನ ಜಾವ ಟ್ರಕ್ ನಿಲ್ಲಿಸಿ ಕೆಳಗಿಳಿದಿದ್ದ ಇವರು, ಸಮೀಪದಲ್ಲಿ ಗೂಟಕ್ಕೆ ಕಟ್ಟಿ ಹಾಕಿದ್ದ ಎಮ್ಮೆ ಕದಿಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮತ್ತೊಂದು ಜನರ ಗುಂಪು ಇವರ ಮೇಲೆ ದಾಳಿ ನಡೆಸಿದೆ.
‘ಸಾಮಾನ್ಯವಾಗಿ ವರದಿಯಾಗುವ ಗುಂಪುದಾಳಿ ರೀತಿಯ ಪ್ರಕರಣ ಇದಲ್ಲ ಎಂದು ನಾವು ನಿಶ್ಚಿತವಾಗಿಯೂ ಹೇಳುತ್ತೇವೆ. ವಾಸ್ತವವಾಗಿ ಇಲ್ಲಿ ಕಳ್ಳತನವಾಗಿರುವುದು ಹಸುವಲ್ಲ, ಎಮ್ಮೆ. ದಾಳಿ ನಡೆಸಿದವರನ್ನು ಪತ್ತೆ ಮಾಡಿ ಶಿಕ್ಷಿಸಲಾಗುವುದು’ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
‘ದಾಳಿಗೊಳಗಾದವರಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಇನ್ನೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ನಾಲ್ಕನೇ ವ್ಯಕ್ತಿ ಆಸ್ಪತ್ರೆಯಲ್ಲಿದ್ದು, ಸ್ಥಿತಿ ಗಂಭೀರವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.