ಜೈಪುರ: ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು ಸರ್ಕಾರದ ವಿರುದ್ಧ ಸ್ವಪಕ್ಷದ ಮೂವರು ಶಾಸಕರು ತಾರತಮ್ಯದ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯದ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಹಾಗೂ ಹಿರಿಯ ಶಾಸಕ ರಮೇಶ್‌ಮೀನಾ, ಶಾಸಕರಾದ ಮುರಳಿ ಲಾಲ್ ಮೀನಾ ಮತ್ತು ವೇದ ಪ್ರಕಾಶ್ ಸೋಲಂಕಿ ಸರ್ಕಾರದ ವಿರುದ್ಧ ತಾರತಮ್ಯದ ಆರೋಪ ಮಾಡಿದ್ದಾರೆ.
ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ವಿಧಾನಸಭೆಯಲ್ಲಿ ನಮಗೆ ಮೈಕ್ ಇಲ್ಲದೇ ಆಸನ ವ್ಯವಸ್ಥೆ ಮಾಡಲಾಗಿದೆ. ಇದು ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳ ಧ್ವನಿಯನ್ನು ಅಡಗಿಸುವ ತಂತ್ರವಾಗಿದೆ ಎಂದು ಮೂವರು ಶಾಸಕರು ಆರೋಪಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಅವರ ಭೇಟಿಗೆ ಸಮಯ ಕೋರಿದ್ದೇವೆ. ನಮ್ಮ ಸಮಸ್ಯೆಗಳು ಬಗೆಹರಿಯದಿದ್ದರೆ ನಾವು ರಾಜಿನಾಮೆಗೂ ಸಿದ್ಧರಿದ್ದೇವೆ ಎಂದು ರಮೇಶ್ ಮೀನಾ ತಿಳಿಸಿದ್ದಾರೆ.
ಕಳೆದ ವರ್ಷ ಜುಲೈ-ಆಗಸ್ಟ್ ನಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ, ಸಚಿನ್ ಪೈಲಟ್ ಮತ್ತು ಪಕ್ಷದ ಇತರ 18 ಶಾಸಕರು ಗೆಹ್ಲೋಟ್ ಅವರ ನಾಯಕತ್ವದ ವಿರುದ್ಧ ಬಂಡಾಯ ಎದಿದ್ದರು. ನಂತರ ಪಕ್ಷದ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಭಿನ್ನಮತ ಶಮನಗೊಂಡಿತ್ತು.
ಶಾಸಕ ರಮೇಶ್ ಮೀನಾ ಅವರ ನೇತೃತ್ವದಲ್ಲಿ ಇದೀಗ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ರಮೇಶ್ ಮೀನಾ ಅವರನ್ನು ಕಳೆದ ವರ್ಷ ಸಂಪುಟದಿಂದ ಕೈಬಿಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.