ಕಾನ್ಪುರ, ಉತ್ತರಪ್ರದೇಶ: ಮುಸ್ಲಿಂ ಸಮುದಾಯದ ಇ-ರಿಕ್ಷಾ ಚಾಲಕನಿಗೆ ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿ ಥಳಿಸಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್‌ಗೆ ಸೇರಿದ ಒಬ್ಬ ವ್ಯಕ್ತಿ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ ಅಮನ್ ಗುಪ್ತಾ, ರಾಜೇಶ್ ಅಲಿಯಾಸ್ ಜಯ್ ಮತ್ತು ರಾಹುಲ್ ಎಂಬುವರನ್ನು ಬಂಧಿಸಲಾಗಿದೆ. ಅಮನ್ ಗುಪ್ತಾಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಜತೆಗೆ ಸಂಬಂಧವಿದೆ ಎಂದು ಕಾನ್ಪುರ ಪೊಲೀಸ್ ಆಯುಕ್ತ ಅಸಿಮ್ ಅರುಣ್ ತಿಳಿಸಿದ್ದಾರೆ.
45 ವರ್ಷದ ಅಸ್ರಾರ್ ಅಹ್ಮದ್ ಎಂಬುವರನ್ನು ಕೆಲವು ವ್ಯಕ್ತಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಥಳಿಸಿದ ದೃಶ್ಯವಿರುವ ಒಂದು ನಿಮಿಷದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಹ್ಮದ್ ಅವರ ಪುತ್ರಿ ತನ್ನ ತಂದೆಯನ್ನು ದಾಳಿಕೋರರಿಂದ ರಕ್ಷಿಸಲು ಪ್ರಯತ್ನಿಸುತ್ತಿರುವುದು, ತಂದೆಯನ್ನು ಹೊಡೆಯಬೇಡಿ ಎಂದುಅಳುತ್ತಾ ದಾಳಿಕೋರರನ್ನು ಬೇಡಿಕೊಳ್ಳುತ್ತಿರುವ ದೃಶ್ಯ ಈ ವಿಡಿಯೊದಲ್ಲಿತ್ತು. ಕಾನ್ಪುರದ ಬರ್ರಾ ಪ್ರದೇಶದ ಕಚ್ಚಿ ಬಸ್ತಿಯಲ್ಲಿ ಬುಧವಾರ ಈ ಘಟನೆ ನಡೆದಿತ್ತು.
ಆರೋಪಿಗಳನ್ನು ಬಂಧಿಸಿದ ನಂತರ ಹಿಂದೂ ಸಂಘಟನೆಗಳಿಗೆ ಸಂಬಂಧಿಸಿದ ಕೆಲವರು ಗುರುವಾರ ರಾತ್ರಿ ಡಿಸಿಪಿ ಕಚೇರಿಯ ಹೊರಗೆ ಧರಣಿ ನಡೆಸಿದರು. ಪೊಲೀಸರು ಮನವೊಲಿಸಿದ ನಂತರ ಧರಣಿ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.