ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕುರಿತ 2025ರ ‘ಕ್ಯೂಎಸ್ ಗ್ಲೋಬಲ್ ಎಂಬಿಎ ರ್‍ಯಾಂಕಿಂಗ್ಸ್’ ಪಟ್ಟಿ ಬುಧವಾರ ಪ್ರಕಟವಾಗಿದ್ದು, ಮೊದಲ 100 ಅಗ್ರ ಸಂಸ್ಥೆಗಳಲ್ಲಿ ಮೂರು ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ (ಐಐಎಂ) ಮತ್ತು ಹೈದರಾಬಾದಿನ ‘ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್’ ಸ್ಥಾನ ಪಡೆದಿವೆ.
ಐಐಎಂ– ಬೆಂಗಳೂರು, ಐಐಎಂ– ಅಹಮದಾಬಾದ್ ಮತ್ತು ಐಐಎಂ– ಕಲ್ಕತ್ತ, ಉದ್ಯೋಗವಕಾಶ ಕಲ್ಪಿಸಿಕೊಡುವ ಸಂಸ್ಥೆಗಳ ಪೈಕಿ ಅಗ್ರ 50ರಲ್ಲಿ ಸ್ಥಾನ ಪಡೆದಿವೆ.
ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ಲೇಷಣೆ ನಡೆಸಿ, ರ‍್ಯಾಂಕಿಂಗ್ ನೀಡುವ ಲಂಡನ್ ಮೂಲದ ಕ್ವಾಕ್ವರೇಲಿ ಸೈಮಂಡ್ಸ್ (ಕ್ಯೂಎಸ್) ಎಂಬ ಸಂಸ್ಥೆ ಈ ಜಾಗತಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಪೂರ್ಣ ಕಾಲಿಕ ಎಂಬಿಎ ಕೋರ್ಸ್‌ಗಳನ್ನು ನಡೆಸುವ 14 ಪ್ರತಿಷ್ಠಿತ ಸಂಸ್ಥೆಗಳು ಸ್ಥಾನ ಪಡೆದಿವೆ.
ಅಮೆರಿಕದ ಸ್ಟಾಂಡ್‌ಫೊರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್ ಸತತ ಐದನೇ ವರ್ಷವೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಬೆಂಗಳೂರು, ಅಹಮದಾಬಾದ್, ಕಲ್ಕತ್ತ, ಇಂದೋರ್, ಲಖನೌ, ಉದಯಪುರ, ಕೋಯಿಕ್ಕೋಡ್‌ನ ಐಐಎಂಗಳು, ಗಾಜಿಯಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಟೆಕ್ನಾಲಜಿ (ಐಎಂಟಿ), ಗುರುಗ್ರಾಮದ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ (ಎಂಡಿಐ) ದೆಹಲಿಯ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಕೋಲ್ಕತ್ತದ ಇಂಟರ್‌ನ್ಯಾಷನಲ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಮತ್ತು ಮುಂಬೈನ ಸೋಮಯ್ಯ ವಿದ್ಯಾವಿಹಾರ ವಿಶ್ವವಿದ್ಯಾಲಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.