ತಿರುವನಂತಪುರ: ಈ ವರ್ಷ ಜನಪ್ರಿಯ ತ್ರಿಶೂರ್ ಪೂರಂ ಉತ್ಸವಕ್ಕೆ ಅಡ್ಡಿಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಹಂತದ ತನಿಖೆಗೆ ಆದೇಶಿಸಲಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ ನಡೆದ ತ್ರಿಶೂರ್ ಪೂರಂ ಉತ್ಸವಕ್ಕೆ ಅಡ್ಡಿಪಡಿಸಿರುವುದಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಅವರ ಪಾತ್ರ ಸೇರಿದಂತೆ ಮೂರು ಹಂತದ ತನಿಖೆಗೆ ರಾಜ್ಯ ಸಚಿವ ಸಂಪುಟ ಆದೇಶಿಸಿದೆ ಎಂದು ಅವರು ಹೇಳಿದ್ದಾರೆ.
ತ್ರಿಶೂರ್ ಪೂರಂ ಹಬ್ಬಕ್ಕೆ ಅಡ್ಡಿ, ಅಕ್ರಮ ಹಾಗೂ ವೈಫಲ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮುಖ್ಯಸ್ಥರು, ಅಪರಾಧ ವಿಭಾಗ ಹಾಗೂ ಗುಪ್ತಚರ ದಳದ ತನಿಖೆಯನ್ನು ಒಳಗೊಂಡಿರಲಿದೆ ಎಂದು ಅವರು ವಿವರಿಸಿದ್ದಾರೆ.
ಪೂರಂ ಆಚರಣೆಗೆ ಅಡ್ಡಿಪಡಿಸಿರುವುದಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಜಿತ್ ಕುಮಾರ್ ನೀಡಿದ ವರದಿಯು ಸಮಗ್ರವಾಗಿರದ ಕಾರಣ ಮೂರು ಹಂತದ ತನಿಖೆಗೆ ನಿರ್ಧರಿಸಲಾಗಿದೆ ಎಂದು ಸಿಎಂ ಪಿಣರಾಯಿ ತಿಳಿಸಿದ್ದಾರೆ.
ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಮಾಜಿಕ ವ್ಯವಸ್ಥೆಗೆ ಧಕ್ಕೆಯಾಗಲು ಆಸ್ಪದ ಕೊಡುವುದಿಲ್ಲ. ತನಿಖಾ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತ್ರಿಶೂರ್ ಪೂರಂ ಇತಿಹಾಸದಲ್ಲೇ ಮೊದಲ ಬಾರಿ ನಸುಕಿನ ವೇಳೆ ನಿಗದಿಯಾಗಿದ್ದ ಸಿಡಿಮದ್ದು ಪ್ರದರ್ಶನ ಮರುದಿನ ಹಗಲು ಹೊತ್ತಿನಲ್ಲಿ ಆಯೋಜನೆಯಾಗಿರುವುದು ಪ್ರೇಕ್ಷಕರಲ್ಲಿ ನಿರಾಸೆಗೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.