ನವದೆಹಲಿ: ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ನಾಲ್ಕನೇ ಬ್ಯಾಚ್‌ನ ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ.
ಇದರೊಂದಿಗೆ ಭಾರತೀಯ ವಾಯುಪಡೆ ಮತ್ತಷ್ಟು ಬಲಿಷ್ಠಗೊಂಡಿದೆ. ಫ್ರಾನ್ಸ್‌ನಿಂದ ಹೊರಟ ಮೂರು ಯುದ್ಧ ವಿಮಾನಗಳು ಎಲ್ಲಿಯೂ ನಿಲ್ಲದೆ ನೇರವಾಗಿ ಭಾರತಕ್ಕೆ ಬಂದಿವೆ.
ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ (ಐಎಎಫ್), ಫ್ರಾನ್ಸ್‌ನ ಇಸ್ಟ್ರೆಸ್ ವಾಯುನೆಲೆಯಿಂದ ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳು ಆಗಮಿಸಿವೆ ಎಂದು ತಿಳಿಸಿದೆ.
ಫ್ರಾನ್ಸ್‌ನಿಂದ ಹೊರಟ ರಫೇಲ್ ಯುದ್ಧ ವಿಮಾನಗಳಿಗೆ ಯುಎಇ ವಾಯುಮಾರ್ಗದಲ್ಲಿ ಇಂಧನ ತುಂಬಿಸಲಾಗಿತ್ತು. ಇದು ಎರಡು ವಾಯುಪಡೆಗಳ ಬಲವಾದ ಸಂಬಂಧಕ್ಕೆ ಮತ್ತೊಂದು ಮೈಲುಗಲ್ಲಾಗಿದೆ. ಯುಎಇ ವಾಯುಪಡೆಗೆ ಧನ್ಯವಾದಗಳು ಎಂಬುದನ್ನು ಐಎಎಫ್ ಉಲ್ಲೇಖಿಸಿದೆ.
ಹಾಗಿದ್ದರೂ ಭಾರತದ ಯಾವ ವಾಯುನೆಲೆಗೆ ರಫೇಲ್ ಜೆಟ್‌ಗಳು ಬಂದಿಳಿದಿವೆ ಎಂಬುದನ್ನು ಐಎಎಫ್ ತಿಳಿಸಿಲ್ಲ.
ಮೂರು ನೂತನ ಜೆಟ್‌ಗಳ ಆಗಮನದೊಂದಿಗೆ ರಫೇಲ್ ಯುದ್ಧವಿಮಾನಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಯುದ್ಧ ವಿಮಾನಗಳ ಖರೀದಿಗೆ ಸಹಿ ಹಾಕಿದ ನಾಲ್ಕು ವರ್ಷಗಳ ಬಳಿಕ ಜುಲೈ 29ರಂದು ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿತ್ತು. ಫ್ರಾನ್ಸ್‌ನೊಂದಿಗೆ ಮಾಡಿಕೊಂಡಿರುವ ₹59,000 ಕೋಟಿ ವೆಚ್ಚದ ರಕ್ಷಣಾ ಒಪ್ಪಂದದಂತೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಭಾರತಕ್ಕೆ ಆಗಮಿಸಲಿವೆ.
ಬಳಿಕ ನವೆಂಬರ್ 3ರಂದು ಎರಡನೇ ಮತ್ತು ಜನವರಿ 27ರಂದು ಮೂರನೇ ಹಂತದ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದವು. ರಫೇಲ್ ಯುದ್ಧವಿಮಾನವು ಭಾರತೀಯ ವಾಯುಪಡೆಯ ಅಂಬಾಲ ಗೋಲ್ಡನ್ ಏರೋಸ್ ಸ್ಕ್ವಾಡ್ರನ್ ವಾಯುನೆಲೆಯಲ್ಲಿ ಕಾರ್ಯಾಚರಿಸುತ್ತಿದೆ.
ಇದನ್ನೂ ಓದಿ:ವೈಮಾನಿಕ ಕವಾಯತಿನಲ್ಲಿ ರಫೇಲ್ ಪ್ರದರ್ಶನ
ರಷ್ಯಾದಿಂದ ಸುಖೊಯ್ ಖರೀದಿಸಿದ 23 ವರ್ಷಗಳ ಬಳಿಕ ಭಾರತ ಮಾಡಿಕೊಂಡಿರುವ ಅತಿ ದೊಡ್ಡ ಒಪ್ಪಂದ ಇದಾಗಿದೆ. ರಫೇಲ್ ಯುದ್ಧ ವಿಮಾನಗಳು ಕ್ಷಿಪಣಿ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಯುರೋಪ್ ಕ್ಷಿಪಣಿ ತಯಾರಕ ಎಂಬಿಡಿಎನ ಮೀಟಿಯಾರ್ ಬಿಯಾಂಡ್ ವಿಷ್ಯುವಲ್ ರೇಂಜ್ ಏರ್-ಟು-ಏರ್ ಮಿಸೈಲ್, ಸ್ಕಾಲ್ಫ್ ಕ್ರೂಸ್ ಮಿಸೈಲ್ ಮತ್ತು ಎಂಐಸಿಎ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ರಫೇಲ್ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.