ರಾಯಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮತ್ತು ಪೊಲೀಸ್ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ.
ಶನಿವಾರ ಬೆಳಗ್ಗೆ ತೆಲಂಗಾಣ ಮತ್ತು ಛತ್ತೀಸಗಢದ ಗಡಿಯಲ್ಲಿರುವ ಪೂಜಾರಿ ಕಾಂಕೇರ್ ಅರಣ್ಯದಲ್ಲಿ ಈ ಗುಂಡಿನ ಕಾಳಗ ನಡೆದಿದೆ. ಪೂಜಾರಿ ಕಾಂಕೇರ್ ಅರಣ್ಯ ಪ್ರದೇಶ ಛತ್ತೀಸಗಢದ ಬಿಜಾಪುರ ಜಿಲ್ಲಾ ವ್ಯಾಪ್ತಿಗೆ ಸೇರುತ್ತದೆ.
ಛತ್ತೀಸಗಢ ನಕ್ಸಲ್ ನಿಗ್ರಹ ಪಡೆ ಮತ್ತು ತೆಲಂಗಾಣ ವಿಶೇಷ ಪೊಲೀಸ್ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಖಚಿತ ಮಾಹಿತಿ ಪಡೆದು ಅರಣ್ಯ ಪ್ರದೇಶದಲ್ಲಿ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮೃತ ನಕ್ಸಲರ ಗುರುತು ಪತ್ತೆಯಾಗಿಲ್ಲ, ಗುಂಡಿನ ಕಾಳಗ ನಡೆದ ಸ್ಥಳದಿಂದ ಬಂದೂಕು, ಮದ್ದು ಗುಂಡು, ಕೈಬಾಂಬ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯಲ್ಲಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.