ADVERTISEMENT

ಕಾಂಗ್ರೆಸ್‌ ಉನ್ನತ ಸಮಿತಿಯಲ್ಲಿ ರಾಜ್ಯದ ಮೂವರಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:30 IST
Last Updated 27 ಅಕ್ಟೋಬರ್ 2022, 21:30 IST
   

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ (ಎಐಸಿಸಿ) ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 47 ನಾಯಕರನ್ನು ಒಳಗೊಂಡ ಉನ್ನತ ಸಮಿತಿಯನ್ನು ರಚಿಸಿದ್ದು, ಕರ್ನಾಟಕದ ಮೂವರು ಮುಖಂಡರು ಸ್ಥಾನ ಪಡೆದಿದ್ದಾರೆ.

ಸೋನಿಯಾ ಗಾಂಧಿ, ಮನಮೋಹನ್ ಸಿಂಗ್‌, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಈ ಸಮಿತಿಯಲ್ಲಿ ಇದ್ದಾರೆ. ಕರ್ನಾಟಕದ ಕೆ.ಎಚ್‌.ಮುನಿಯಪ್ಪ, ಎಚ್‌.ಕೆ.ಪಾಟೀಲ, ದಿನೇಶ್ ಗುಂಡೂರಾವ್ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾ
ಗಿದೆ. ಆದರೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹಲೋತ್‌, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿ ತರೂರ್ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡದೆ ಇರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಕ್ಷಕ್ಕೆ ನೂತನ ಅಧ್ಯಕ್ಷರು ನೇಮಕವಾದ ಬೆನ್ನಲ್ಲೇ, ಪಕ್ಷದ ಅತ್ಯುನ್ನತ ತೀರ್ಮಾನಗಳನ್ನು ತೆಗೆದುಕೊಳ್ಳುವ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ವಿಸರ್ಜಿಸಲಾಗಿತ್ತು. ಉನ್ನತ ಸಮಿತಿಯು ಕಾರ್ಯಕಾರಿ ಸಮಿತಿಯ ಜಾಗದಲ್ಲಿ ಕೆಲಸ ಮಾಡಲಿದೆ. ಈ
ಸಮಿತಿಯು ಸರ್ವ ಸದಸ್ಯರ ಅಧಿವೇಶನದ ಸ್ಥಳ ಹಾಗೂ ದಿನಾಂಕವನ್ನು ನಿಗದಿ ಮಾಡಲಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ ಮುಗಿದ ನಂತರ ಸರ್ವ ಸದಸ್ಯರ ಅಧಿವೇಶನ ನಡೆಯಲಿದೆ. ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.