ADVERTISEMENT

ಶ್ರೀನಗರ: ಯೋಧರ ಮೇಲೆ ದಾಳಿ ನಡೆಸಿದ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಪಿಟಿಐ
Published 28 ಅಕ್ಟೋಬರ್ 2024, 13:36 IST
Last Updated 28 ಅಕ್ಟೋಬರ್ 2024, 13:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಿಟಿಐ

ಶ್ರೀನಗರ: ಜಮ್ಮುವಿನ ಗಡಿ ಜಿಲ್ಲೆ ಅಖ್ನೂರ್‌ನ ಬತಲ್ ಪ್ರದೇಶದಲ್ಲಿ ಮಿಲಿಟರಿ ವಾಹನದ ಮೇಲಿನ ದಾಳಿ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ

ADVERTISEMENT

ಕಾರ್ಯಾಚರಣೆ ವೇಳೆ ಅಡಗಿದ್ದ ಭಯೋತ್ಪಾದಕರು ಸೇನೆ ವಿರುದ್ಧ ದಾಳಿಗೆ ಮುಂದಾಗಿದ್ದಾರೆ. ಈ ಸಂದರ್ಭ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ವಾರ ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ಜಮ್ಮು ಮತ್ತು ಕಾಶ್ಮೀರವು ಸರಣಿ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿದೆ.

ಕಳೆದ ವಾರ ನಡೆದ ಎರಡು ಭಯೋತ್ಪಾದಕ ದಾಳಿಯಲ್ಲಿ ಯೋಧರು ಸೇರಿ 12 ಮಂದಿ ಮೃತಪಟ್ಟಿದ್ದಾರೆ.

ಅಕ್ಟೋಬರ್ 18ರಂದು ಗಂದೇರ್‌ಬಲ್ ಜಿಲ್ಲೆಯ ಗಗಂಗೀರ್ ಸುರಂಗ ನಿರ್ಮಾಣದ ಸ್ಥಳದಲ್ಲಿ ನಡೆದ ದಾಳಿಯಲ್ಲಿ ಬುದ್ಗಾಮ್‌ನ ವೈದ್ಯ ಮತ್ತು 6 ಮಂದಿ ಕಾರ್ಮಿಕರು ಮೃತಪಟ್ಟಿದ್ದರು.

ಅಕ್ಟೋಬರ್ 24ರಂದು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ಬಳಿಯ ಬುತಪತ್ರಿ ಬಳಿ ಟ್ರಕ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಯೋಧರು ಸೇರಿ ಐದು ಮಂದಿ ಮೃತಪಟ್ಟಿದ್ದರು.

ಭಯೋತ್ಪಾದಕ ದಾಳಿಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 24ರಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದರು. ಉಗ್ರರ ದಾಳಿ ತಡೆಯಲು, ಮುಖ್ಯ ಮೂಲಸೌಕರ್ಯ ಯೋಜನೆಗಳು ಮತ್ತು ವಲಸೆ ಕಾರ್ಮಿಕರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.