ADVERTISEMENT

ಟಿಕೆಟ್‌ ರಹಿತ ಪ್ರಯಾಣಿಕನ ಸಿಗರೇಟ್‌ ಚಟಕ್ಕೆ ನಿಂತ ವಂದೇ ಭಾರತ್ ರೈಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2023, 10:23 IST
Last Updated 10 ಆಗಸ್ಟ್ 2023, 10:23 IST
ವಂದೇ ಭಾರತ್‌ ರೈಲು (ಚಿತ್ರ: ಟ್ವಿಟರ್‌)
ವಂದೇ ಭಾರತ್‌ ರೈಲು (ಚಿತ್ರ: ಟ್ವಿಟರ್‌)   

ಹೈದರಾಬಾದ್‌: ಟಿಕೆಟ್‌ ರಹಿತ ಪ್ರಯಾಣಿಕನೊಬ್ಬನು ವಂದೇ ಭಾರತ್ ರೈಲಿನ ಶೌಚಾಲಯದೊಳಗೆ ಸಿಗರೇಟ್‌ ಹಚ್ಚಿದ ಪರಿಣಾಮ ರೈಲಿನಲ್ಲಿ ಮೊಳಗಿದ ಅಗ್ನಿಶಾಮಕ ಎಚ್ಚರಿಕೆ ಘಂಟೆ (ಫೈರ್ ಅಲರಾಂ) ಇಡೀ ರೈಲಿನಲ್ಲಿ ಆತಂಕ ಸೃಷ್ಟಿ ಮಾಡಿದೆ.

ಆಂಧ್ರಪ್ರದೇಶದ ತಿರುಪತಿಯಿಂದ ಸಿಕಂದರಾಬಾದ್‌ಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ಈ ಘಟನೆ ನಡೆದಿದೆ.

ಟಿಕೆಟ್‌ ರಹಿತವಾಗಿ ರೈಲು ಹತ್ತಿದ್ದ ಪ್ರಯಾಣಿಕನೊಬ್ಬನು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಶೌಚಾಲಯದೊಳಗೆ ಚಿಲಕ ಹಾಕಿ ಕುಳಿತಿದ್ದನು. ಈ ವೇಳೆ ಸಿಗರೇಟ್‌ ಸೇದುವ ಮನಸ್ಸಾಗಿದ್ದು, ಫೈರ್‌ ಅಲರಾಂಗಳ ಬಗ್ಗೆ ತಿಳಿಯದ ಆತ ಅಲ್ಲಿಯೇ ಸಿಗರೇಟ್‌ ಹಚ್ಚಿದ್ದಾನೆ.

ADVERTISEMENT

ಸಿಗರೇಟ್ ಹಚ್ಚುತ್ತಿದ್ದಂತೆ ಅಗ್ನಿಶಾಮಕ ಎಚ್ಚರಿಕೆ ಘಂಟೆಯು ಮೊಳಗಿದ್ದು, ಒಂದು ಕ್ಷಣ ಇಡೀ ಕಂಪಾರ್ಟ್‌ಮೆಂಟ್‌ನಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಹೊಗೆ ಸೂಚನೆ ಸಿಗುತ್ತಿದ್ದಂತೆ ಸ್ವಯಂಚಾಲಿತ ಅಗ್ನಿಶಾಮಕ ಯಂತ್ರಗಳು ಕಂಪಾರ್ಟ್‌ಮೆಂಟ್‌ ತುಂಬಾ ಏರೋಸಾಲ್‌ ಸಿಂಪಡಿಸಲು ಪ್ರಾರಂಭಿಸಿದವು. ಆತಂಕಗೊಂಡ ಪ್ರಯಾಣಿಕರು ತಕ್ಷಣ ರೈಲ್ವೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮನುಬುಲು ಬಳಿ ರೈಲನ್ನು ನಿಲ್ಲಿಸಿದ ರೈಲ್ವೆ ಪೊಲೀಸರು ಅಗ್ನಿಶಾಮಕ ಯಂತ್ರದೊಂದಿಗೆ ಕಂಪಾರ್ಟ್‌ಮೆಂಟ್‌ ಒಳಗೆ ಪ್ರವೇಶಿಸಿದ್ದಾರೆ. ಬೆಂಕಿ ಮೂಲವನ್ನು ಪತ್ತೆಹಚ್ಚಲು ಶೌಚಾಲಯದ ಕಿಟಕಿ ಗಾಜು ಒಡೆದು ನೋಡಿದ್ದಾರೆ. ಶೌಚಾಲಯದ ಒಳಗೆ ಪ್ರಯಾಣಿಕನೊಬ್ಬನನ್ನು ನೋಡಿದ ಪೊಲೀಸರಿಗೆ ಅಲರಾಂ ಹೊಡೆಯಲು ಆತನ ಸಿಗರೇಟ್‌ ಕಾರಣ ಎಂದು ತಿಳಿದಿದೆ. ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದು ನೆಲ್ಲೂರು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಏರೋಸಾಲ್‌ ಸಿಂಪಡಣೆಯಿಂದ ಇಡೀ ಕಂಪಾರ್ಟ್‌ಮೆಂಟ್‌ ಒಳಗೆ ಹೊಗೆಯಂತಹ ವಾತವಾರಣ ಸೃಷ್ಟಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೊ ತುಣುಕುಗಳು ಹರಿದಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.