ಮುಂಬೈ:ಸರ್ಕಾರಿ ಸ್ವಾಮ್ಯದ ‘ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್’(ಟಿಐಎಫ್‌ಆರ್) ಹಣಕಾಸು ನಿಧಿಯ ಕೊರತೆಯ ಕಾರಣ ತನ್ನ ಉದ್ಯೋಗಿಗಳಿಗೆ ಫೆಬ್ರುವರಿಯ ವೇತನದಲ್ಲಿ ಅರ್ಧ ಮಾತ್ರ ಪಾವತಿ ಮಾಡಲಿದೆ.
‘ಸಾಕಷ್ಟು ಹಣವಿಲ್ಲದ ಕಾರಣ, ಟಿಐಎಫ್‌ಆರ್‌ನ ಎಲ್ಲಾ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಅದರ ಇತರ ಕೇಂದ್ರಗಳು ಮತ್ತು ಶಾಖೆಗಳ ಸಿಬ್ಬಂದಿಗೆ ಫೆಬ್ರುವರಿ ತಿಂಗಳ ವೇತನದಲ್ಲಿ ಶೇಕಡಾ 50ರಷ್ಟನ್ನು ಮಾತ್ರ ಪಾವತಿಸಲಾಗುವುದು’ ಎಂದು ಟಿಐಎಫ್‌ಆರ್‌ನ ರಿಜಿಸ್ಟ್ರಾರ್ ವಿಂಗ್ ಕಮಾಂಡರ್(ನಿವೃತ್ತ) ಜಾರ್ಜ್ ಆಂಟನಿ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
‘ಸಾಕಷ್ಟು ಹಣ ಲಭ್ಯವಾದ ಬಳಿಕ ವೇತನದ ಉಳಿದ ಭಾಗವನ್ನು ಪಾವತಿಸಲಾಗುವುದು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತಂತೆ ಸುದ್ದಿ ಸಂಸ್ಥೆ ಪಿಟಿಐ ಸಂಪರ್ಕಿಸಿದಾಗ ಆಂಟನಿ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಟಿಐಎಫ್‌ಆರ್ ಭಾರತ ಸರ್ಕಾರದ ರಾಷ್ಟ್ರೀಯ ಕೇಂದ್ರವಾಗಿದ್ದು, ಪರಮಾಣು ಇಂಧನ ಇಲಾಖೆಯ ಅಡಿಯಲ್ಲಿದೆ ಹಾಗೂ ಪದವಿ ಮತ್ತು ಪಿಎಚ್.ಡಿ ನೀಡುವ ಸ್ವಾಯತ್ತ ವಿಶ್ವವಿದ್ಯಾಲಯವಾಗಿದೆ.
ಈ ಸಂಸ್ಥೆ ಡಾ.ಹೋಮಿ ಭಾಭಾ ಅವರ ದೂರದೃಷ್ಟಿಯೊಂದಿಗೆ ಡೋರಬ್ಜಿಟಾಟಾ ಟ್ರಸ್ಟ್‌ನ ಅಡಿ 1945ರಲ್ಲಿ ಸ್ಥಾಪನೆಯಾಗಿದೆ.
ಟಿಐಎಫ್‌ಆರ್‌ನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ ಕುರಿತು ಸಂಶೋಧನೆಗಳು ನಡೆಯುತ್ತವೆ.
ಇದರ ಕೇಂದ್ರ ಸ್ಥಾನ ಮುಂಬೈನಲ್ಲಿದ್ದು, ಪುಣೆ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೂ ಕೇಂದ್ರಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.