ಗುಜರಾತ್: ರಾಜ್ಯದಲ್ಲಿ 25 ವರ್ಷಗಳ ಬಳಿಕ ಹುಲಿವೊಂದು ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ್ದಾರೆ.
ಲೂನ್ವಾಡ್-ಸಾಂಟ್ರಾಂಪುರ್ ಜಿಲ್ಲೆಗಳು ಆರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ ಎಂದು ಉಪ ಅರಣ್ಯ ಅಧಿಕಾರಿ ಆರ್.ಎಂ. ಪರ್ಮಾರ್ ಹೇಳಿದರು.
ಹುಲಿ ಪತ್ತೆಯಾಗಿರುವ ಸ್ಥಳ ಏಷಿಯಾಟಿಕ್ ಸಿಂಹಗಳ ನೆಲೆಯಾಗಿರುವ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯದಿಂದ 500 ಕಿ.ಮೀ ದೂರದಲ್ಲಿದೆ.
ಪತ್ತೆಯಾಗಿರುವ ಹುಲಿಗೆ 7ರಿಂದ 8 ವರ್ಷ ವಯಸ್ಸಾಗಿದ್ದು, ರಾಜಸ್ಥಾನ, ಮಹಾರಾಷ್ಟ್ರ ಅಥವಾ ಮಧ್ಯ ಪ್ರದೇಶ ರಾಜ್ಯಗಳಿಂದ ಬಂದಿರಬಹುದು ಎಂದು ಅರಣ್ಯ ಸಚಿವ ಗಣಪತ್ ವಸವಾ ತಿಳಿಸಿದ್ದಾರೆ.
‘ಉಜ್ಜೈನ್ ಕಾಡಿನ ಪ್ರದೇಶದಲ್ಲಿ ಕೆಲವು ಹುಲಿಗಳು ಕಾಣೆಯಾಗಿರುವ ಬಗ್ಗೆ ವರದಿಗಳಿವೆ. ನಾವು ಅದನ್ನು ದೃಢೀಕರಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.
‘ಕಳೆದ ವಾರ ಶಿಕ್ಷಕ ಮಹೇಶ್ ಮಾಹೆರಾ ಎಂಬುವವರು ತಮ್ಮ ಕ್ಯಾಮೆರಾದಲ್ಲಿ ಬೇರಿಯಾ ಗ್ರಾಮದ ಬಳಿ ಹುಲಿಯನ್ನುಸೆರೆ ಹಿಡಿದಿದ್ದರು. ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ 5 ಕ್ಯಾಮೆರಾಗಳ ಅಳವಡಿಸಿದ್ದೇವೆ. ಇದಕ್ಕೂ ಮೊದಲ ಅರಣ್ಯ ಇಲಾಖೆ ಹುಲಿ ಚಲನವಲನ ಕುರಿತು ನಿಗಾ ವಹಿಸಲಾಗಿತ್ತು’ ಎಂದು ಪರ್ಮಾರ್ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, 1989ರಲ್ಲಿ 13 ಹುಲಿಗಳು ಇರುವುದಾಗಿ ಅಂದಾಜಿಸಲಾಗಿತ್ತು. ಬಳಿಕ 1992ರ ಹುಲಿ ಗಣತಿ ಪ್ರಕಾರ ರಾಜ್ಯದಲ್ಲಿ ಹುಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.