ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ (ಐಬಿ) ಸಚಿವ ಪ್ರಕಾಶ್ ಜಾವಡೇಕರ್ ಅವರು ಶನಿವಾರ ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ, ಇದು ಮುಂದಿನ 25 ವರ್ಷಗಳ ದಾರಿಯನ್ನು ರೂಪಿಸಲು ನೆರವಾಗುವಂತೆ ಸ್ವಾತಂತ್ರ್ಯ ಹೋರಾಟದ ಸಿದ್ಧಾಂತಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಾಗಿ ಹೇಳಿದರು.
ಬ್ಯೂರೋ ಆಫ್ ಔಟ್‌ರೀಚ್ ಅಂಡ್ ಕಮ್ಯುನಿಕೇಷನ್ (ಬಿಒಸಿ) ಆಯೋಜಿಸಿರುವ ಈ ಪ್ರದರ್ಶನವು ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸಲು ಐಬಿ ಸಚಿವಾಲಯವು ನಡೆಸಿದ ಬೃಹತ್ ಜಾಗೃತಿ ಅಭಿಯಾನದ ಭಾಗವಾಗಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ನಾವು ಎಷ್ಟು ದೂರಕ್ಕೆ ಬಂದಿದ್ದೇವೆ ಮತ್ತು ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ನಾವು ಏನನ್ನು ಸಾಧಿಸಬೇಕೆಂಬುದನ್ನು ಕಲ್ಪಿಸಿಕೊಳ್ಳುವ ಮಹತ್ವದ ಕ್ಷಣವಾಗಿದೆ ಎಂದು ಹೇಳಿದರು.
ಈ ಪ್ರದರ್ಶನಗಳಿಂದ ತಿಳಿದು ಬರುವ ಪ್ರಮುಖ ನಂಬಿಕೆಯಿದು. ದೇಶದ ಸ್ವಾತಂತ್ರ್ಯಕ್ಕಾಗಿ ಹೆಚ್ಚಿನ ಬೆಲೆಯನ್ನು ತೆತ್ತಿದ್ದೇವೆ ಮತ್ತು ಈ ಪ್ರದರ್ಶನವು ಆ ತ್ಯಾಗದ ಹಿಂದಿನ ಕಥೆಯನ್ನು ನಿರೂಪಿಸಲು ಪ್ರಯತ್ನಿಸುತ್ತದೆ ಎಂದ ಅವರು, ಬಿಒಸಿಯು ಪ್ರದರ್ಶನ ಆಯೋಜಿಸಿದ್ದಕ್ಕಾಗಿ ಅಭಿನಂದಿಸಿದರು.
'ದೇಶಾದ್ಯಂತ ಬಿಒಸಿ ಸ್ಥಾಪಿಸಿದ ಪರಿಣಾಮಕಾರಿ ಪ್ರದರ್ಶನಗಳು ಸ್ವಾತಂತ್ರ್ಯ ಹೋರಾಟದ ನೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತದೆ ಮತ್ತು ಮುಂದಿನ 25 ವರ್ಷಗಳವರೆಗೆ ನಮ್ಮ ಹಾದಿಯನ್ನು ರೂಪಿಸುತ್ತವೆ. ಇಂತಹ 7 ಪ್ರದರ್ಶನಗಳನ್ನು ಇಂದು ಉದ್ಘಾಟಿಸಲಾಯಿತು. ಇಂತಹ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಅವರೊಂದಿಗೆ ಇತಿಹಾಸದ ಒಂದು ಭಾಗವಾಗಲು ನಾನು ಜನರನ್ನು ಆಹ್ವಾನಿಸುತ್ತೇನೆ' ಎಂದು ಹೇಳಿದರು.
ಈ ಪ್ರದರ್ಶನಗಳಲ್ಲಿ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಪಂಡಿತ್ ಜವಾಹರಲಾಲ್ ನೆಹರು, ಸರೋಜಿನಿ ನಾಯ್ಡು, ಚಕ್ರವರ್ತಿ ರಾಜಗೋಪಾಲಚಾರಿ, ಬಾಲ ಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತರಾಯ್ ಮತ್ತು ಕ್ರಾಂತಿಕಾರಿಗಳಾದ ಶಹೀದ್ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಇನ್ನೂ ಅನೇಕರ ವಿವಿಧ ಸ್ವಾತಂತ್ರ್ಯ ಪ್ರತಿಮೆಗಳ ಮೂಲಕ ಅವರ ತ್ಯಾಗ ಮತ್ತು ಹೋರಾಟಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.