ADVERTISEMENT

ಟೈಮ್ಸ್‌ ಗ್ರೂಪ್‌ನ ಅಧ್ಯಕ್ಷೆ ಇಂದು ಜೈನ್‌ ನಿಧನ; ಪ್ರಧಾನಿ ಸೇರಿ ಗಣ್ಯರ ಸಂತಾಪ

ಪಿಟಿಐ
Published 14 ಮೇ 2021, 8:17 IST
Last Updated 14 ಮೇ 2021, 8:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ (ಪಿಟಿಐ): ಟೈಮ್ಸ್‌ ಗ್ರೂಪ್‌ನ ಅಧ್ಯಕ್ಷೆ ಇಂದು ಜೈನ್‌ (84) ಅವರು ಕೋವಿಡ್‌ ಸಂಬಂಧಿ ಆರೋಗ್ಯ ತೊಂದರೆಗಳಿಂದ ದೆಹಲಿಯಲ್ಲಿ ಗುರುವಾರ ನಿಧನರಾದರು.

ಮಹಾನ್‌ ದೂರದೃಷ್ಟಿಯುಳ್ಳವರಾಗಿದ್ದ ಇಂದು ಜೈನ್‌, ‘ಟೈಮ್ಸ್‌ ನೌ‘ ಸುದ್ದಿ ಚಾನೆಲ್‌ನ ಸ್ಥಾಪಕರಷ್ಟೇ ಅಲ್ಲ, ಲೋಕೋಪಕಾರಿಯಾಗಿದ್ದರು. ಕಲಾಪೋಷಕರಾಗಿದ್ದ ಅವರು, ಮಹಿಳಾ ಹಕ್ಕುಗಳ ಪ್ರತಿಪಾದಕರೂ ಆಗಿದ್ದರು.

1983ರಲ್ಲಿ ಸ್ಥಾಪನೆಯಾದ ಎಫ್‌ಐಸಿಸಿಐನ ಮಹಿಳಾ ವಿಭಾಗದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, 1999ರಲ್ಲಿ ಟೈಮ್ಸ್ ಗ್ರೂಪ್‌ನ ಅಧ್ಯಕ್ಷರಾದರು. 2000ನೇ ಇಸವಿಯಲ್ಲಿ ಟೈಮ್ಸ್‌ ಫೌಂಡೇಷನ್‌ ಸ್ಥಾಪಿಸಿದರು. ಅವರು ಭಾರತೀಯ ಜ್ಞಾನಪೀಠ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದರು. 2000ರಲ್ಲಿ ಅವರು ವಿಶ್ವಸಂಸ್ಥೆಯಲ್ಲಿ ಸಹಸ್ರಮಾನದ ಶಾಂತಿ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

ADVERTISEMENT

ಮೃತರು ತನ್ನ ಅಂಗಗಳನ್ನು ದಾನ ಮಾಡುವ ಆಶಯ ಹೊಂದಿದ್ದರು. ಆದರೆ, ಕೊರೊನಾ ವೈರಸ್‌ನಿಂದಾಗಿ ಅವರ ಈ ಆಸೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಇಂದು ಜೈನ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

'ಟೈಮ್ಸ್ ಸಮೂಹದ ಅಧ್ಯಕ್ಷೆ ಶ್ರೀಮತಿ ಇಂದೂ ಜೈನ್ ನಿಧನದಿಂದ ಅತೀವ ಬೇಸರವಾಗಿದೆ. ಸಮಾಜ ಸೇವೆ, ದೇಶದ ಪ್ರಗತಿಗಾಗಿ ಅವರು ತೋರಿದ ಉತ್ಸಾಹ ಮತ್ತು ನಮ್ಮ ಸಂಸ್ಕೃತಿ ಬಗ್ಗೆ ಹೊಂದಿರುವ ಆಸಕ್ತಿಯಿಂದಾಗಿ ಸದಾ ಸ್ಮರಣೆಯಲ್ಲಿ ಇರುತ್ತಾರೆ. ಅವರೊಂದಿಗಿನ ನನ್ನ ಭೇಟಿಯನ್ನು ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದ್ದೇನೆ. ಓಂ ಶಾಂತಿ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.