ತಿರುಮಲ: ಭಗವಾನ್ನಾರಾಯಣನು ಇಬ್ಬರು ಅಸುರರಿಗಾಗಿ ವೈಕುಂಠದ ದ್ವಾರವನ್ನು ತೆರೆದ ದಿನವೆಂದು ಆಚರಿಸಲಾಗುವ ವೈಕುಂಠ ಏಕಾದಶಿಯನ್ನು ಪ್ರಸಕ್ತ ವರ್ಷ ಡಿ. 23ರಂದು ಆಚರಿಸಲಾಗುತ್ತಿದೆ.
ಅಂದು ಬಹುತೇಕ ವಿಷ್ಣುದೇವಾಲಯಗಳಲ್ಲಿ ವೈಕುಂಠದ್ವಾರವನ್ನು ನಿರ್ಮಿಸಲಾಗುತ್ತದೆ. ಈ ದಿನದಂದು ಭಕ್ತರು ದೇವರ ದರ್ಶನ ಮಾಡಿ ಈ ದ್ವಾರದ ಮೂಲಕ ಹಾಯ್ದುಬರುವ ಕ್ರಮ ರೂಢಿಯಲ್ಲಿದೆ.
ತಿರುಪತಿಯ ವೇಂಕಟಾದ್ರಿಯನ್ನು ಕಲಿಯುಗದಲ್ಲಿ ಭೂಮಿಯ ಮೇಲೆ ಇರುವ ವೈಕುಂಠವೆಂದೇ ಪರಿಗಣಿಸಲಾಗುತ್ತದೆ. ಅಲ್ಲಿ ಡಿ. 23ರಂದು ರಾತ್ರಿ 1.45ಕ್ಕೆ ವೈಕುಂಠ ದ್ವಾರ ದರ್ಶನ ಆರಂಭವಾಗಲಿದೆ. ಇದು ಜ. 1ರವರೆಗೂ ತೆರೆದಿರಲಿದೆ ಎಂದು ತಿರಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಪವಿತ್ರ ದಿನದಂದು ದೇವಾಲಯದ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ನಂತರ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತಿದೆ. ಡಿ. 23ರಂದು ತೆರೆಯುವ ಉತ್ತರ ದ್ವಾರವು 2024ರ ಜ. 1ರವರೆಗೂ ತೆರೆದಿರಲಿದೆ’ ಎಂದಿದ್ದಾರೆ.
‘ತಿರುಪತಿಯ ಒಂಭತ್ತು ಬೇರೆ ಬೇರೆ ಸ್ಥಳಗಳಲ್ಲಿ ಸ್ಥಾಪಿಸಿರುವ 90 ಕೌಂಟರ್‌ಗಳಲ್ಲಿ ಸರ್ವ ದರ್ಶನದ 4.23 ಲಕ್ಷ ಟಿಕೆಟ್ ವಿತರಣೆ ನಡೆಯಲಿದೆ. ಇದರಲ್ಲಿ ದರ್ಶನದ ದಿನ ಹಾಗೂ ಸಮಯ ನಮೂದಿಸಲಾಗಿರುತ್ತದೆ. ಇದು ಡಿ. 22ರಂದು ಮಧ್ಯಾಹ್ನ 2ರಿಂದ ಟಿಟಿಡಿಯ ವಿಷ್ಣು ನಿವಾಸಂ, ಶ್ರೀನಿವಾಸಂ, ಗೋವಿಂದರಾಜ ಚೌಲ್ಟ್ರಿ, ಭೂದೇವಿ ಕಾಂಪ್ಲೆಕ್ಸ್, ರಾಮಚಂದ್ರ ಪುಷ್ಕರಣಿ, ಇಂದಿರ ಮೈದಾನ, ಜೀವ ಕೋನ ಪ್ರೌಢಶಾಲೆ, ಎಂ.ಆರ್. ಪಾಲಿ ಪ್ರೌಢಶಾಲೆ, ರಾಮ ನಾಯ್ಡು ಶಾಲೆಯಲ್ಲಿ ಟೋಕನ್ ವಿತರಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ಅತಿ ಗಣ್ಯ ವ್ಯಕ್ತಿಗಳು ಭೇಟಿ ನೀಡಿದರೆ ಶಿಷ್ಟಾಚಾರ ಪಾಲನೆ ಕಡ್ಡಾಯವಾಗಲಿದೆ. ಹೀಗಾಗಿ ದರ್ಶನದಲ್ಲಿ ವಿಳಂಬವಾಗುವ ಸಾಧ್ಯತೆಗಳಿರುತ್ತವೆ. ಈ ಹತ್ತು ದಿನಗಳ ಕಾಲ ಬೆಟ್ಟಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹತ್ತು ದಿನಗಳ ಕಾಲ ಯಾವುದೇ ಶಿಫಾರಸು ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.