ಅಮರಾವತಿ: ದೇಶದ ಅತ್ಯಂತ ಶ್ರೀಮಂತ ದೇಗುಲ ಎಂದು ಹೆಸರಾದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯದ ‘ವಿಐಪಿ ದರ್ಶನ’ಕ್ಕೆ ಭಾರಿ ಬೇಡಿಕೆ ಇದೆ. ಈಗ, ಈ ಸೌಲಭ್ಯವನ್ನು ₹10 ಸಾವಿರ ಪಾವತಿಸಿ ಯಾರು ಬೇಕಿದ್ದರೂ ಪಡೆಯಬಹುದು.
₹10 ಸಾವಿರದಿಂದ ₹99,999ರವರೆಗೆ ಪಾವತಿಸಿ ಒಂದು ಬಾರಿ ವಿಶೇಷ ದರ್ಶನದ ಟಿಕೆಟ್ ಪಡೆದುಕೊಳ್ಳಬಹುದು. ಗರಿಷ್ಠ ಒಂಬತ್ತು ಟಿಕೆಟ್ ಪಡೆಯಲು ಅವಕಾಶ ಇದೆ. ₹99,999 ದೇಣಿಗೆ ಕೊಟ್ಟವರು ಒಂಬತ್ತು ಟಿಕೆಟ್ ಪಡೆಯಲು ಅರ್ಹರು.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣ ಟ್ರಸ್ಟ್ (ಶ್ರೀವಾಣಿ) ಅನ್ನು ಆರಂಭಿಸಿದೆ. ಈ ಟ್ರಸ್ಟ್ ಮೂಲಕ ದೇಣಿಗೆ ಪಡೆದುಕೊಳ್ಳಲಾಗುವುದು ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ತಿಳಿಸಿದ್ದಾರೆ.
ಟಿಟಿಡಿಯ ಇತರ ಟ್ರಸ್ಟ್‌ಗಳಿಗೆ ದೇಣಿಗೆ ನೀಡುವವರಿಗೆ ದೊರೆಯುವ ಎಲ್ಲ ಸೌಲಭ್ಯಗಳೂ ಶ್ರೀವಾಣಿ ಟ್ರಸ್ಟ್‌ಗೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ದೇಣಿಗೆ ನೀಡುವವರಿಗೆ ದೊರೆಯಲಿವೆ ಎಂದು ಧರ್ಮ ರೆಡ್ಡಿ ಹೇಳಿದ್ದಾರೆ.
ಶ್ರೀವಾಣಿ ಟ್ರಸ್ಟ್‌ಗೆ ದೇಣಿಗೆ ಪಡೆಯುವುದಕ್ಕಾಗಿ ಗೋಕುಲಂ ರೆಸ್ಟ್ ಹೌಸ್‌ನಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ದೇಣಿಗೆ ನೀಡಿದ ತಕ್ಷಣವೇ ವಿಐಪಿ ದರ್ಶನದ ಟಿಕೆಟ್ ನೀಡಲಾಗುವುದು. ಇದು ದೇಣಿಗೆ ನೀಡಿದ ಮರುದಿನಕ್ಕೆ ಅನ್ವಯವಾಗುತ್ತದೆ. ದೇಣಿಗೆ ನೀಡಿದ ಬಳಿಕ ವಿಐಪಿ ದರ್ಶನದ ಟಿಕೆಟ್‌ಗೆ ₹500 ಶುಲ್ಕವನ್ನೂ ಪಾವತಿಸಬೇಕು.
ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಅಥವಾ ನಗದು ರೂಪದಲ್ಲಿ ದೇಣಿಗೆ ಪಾವತಿಸಲು ಅವಕಾಶ ಇದೆ. ಆಯಾ ತಿಂಗಳಿನ ಪ್ರತಿ ದಿನ ಎಷ್ಟು ಜನರಿಗೆ ವಿಐಪಿ ದರ್ಶನದ ಅವಕಾಶ ದೊರೆಯಲಿದೆ ಎಂಬುದನ್ನು ಒಂದು ತಿಂಗಳು ಮೊದಲೇ ಪ್ರಕಟಿಸಲಾಗುವುದು. ಎಷ್ಟು ಜನರಿಗೆ ಅವಕಾಶ ಕೊಡಬೇಕು ಎಂಬುದನ್ನು ಟ್ರಸ್ಟ್ ಕಾಲಕಾಲಕ್ಕೆ ನಿರ್ಧರಿಸಲಿದೆ.
ಸೋಮವಾರದಿಂದಲೇ ಈ ವ್ಯವಸ್ಥೆ ಆರಂಭವಾಗಿದೆ. ಚೆನ್ನೈನ ರಾಮಯ್ಯ ಎಂಬವರು ₹40 ಸಾವಿರ ಪಾವತಿಸಿ ಮೊದಲಅವಕಾಶ ಪಡೆದುಕೊಂಡಿದ್ದಾರೆ. ದೇಣಿಗೆ ಮೂಲಕ ‘ವಿಐಪಿ ದರ್ಶನ’ ಪಡೆಯುವ ಅವಕಾಶ ತಮಗೆ ದೊರೆತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸನಾತನ ಧರ್ಮ ರಕ್ಷಣೆಗೆ ದೇಣಿಗೆ
ಶ್ರೀವಾಣಿ ಟ್ರಸ್ಟ್ ಮೂಲಕ ಸಂಗ್ರಹಿಸಲಾಗುವ ಹಣವನ್ನು ವಿವಿಧ ಸ್ಥಳಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ದೇವಾಲಯ ನಿರ್ಮಿಸುವುದು ಟ್ರಸ್ಟ್‌ನ ಉದ್ದೇಶ. ಮತಾಂತರ ತಡೆ ಮತ್ತು ಹಿಂದೂ ಸನಾತನ ಧರ್ಮದ ರಕ್ಷಣೆ ಮತ್ತು ಪ್ರಚಾರ ಇದರ ಉದ್ದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.