ನವದೆಹಲಿ: ರೈತ ಮಹಿಳೆಯರೇ ನಡೆಸುವ ತಿರುಪತಿ ಮೂಲದ ಶ್ರೀಜಾ ಹಾಲು ಉತ್ಪಾದಕರ ಕಂಪನಿಯು ಷಿಕಾಗೊದಲ್ಲಿ ನಡೆದ ಜಾಗತಿಕ ಡೈರಿ ಸಮಾವೇಶದಲ್ಲಿ ಮಹಿಳಾ ಸಬಲೀಕರಣ ವಿಭಾಗದಲ್ಲಿನ ವಿನೂತನ ಪ್ರಯತ್ನಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದೆ.
ಭಾರತದಿಂದ ಈ ಪ್ರಶಸ್ತಿಗಾಗಿ ನಾಮನಿರ್ದೇಶಿತಗೊಂಡ ಮೂರು ಸಂಸ್ಥೆಗಳಲ್ಲಿ ಶ್ರೀಜಾ ಕೂಡಾ ಒಂದು. ಎನ್‌ಡಿಎಸ್ ನಡೆಸುವ ಉದಯಪುರದ ಆಶಾ ಹಾಲು ಉತ್ಪಾದಕರ ಕಂಪನಿ ಮತ್ತು ಗುಜರಾತ್ ಹಾಲು ಮತ್ತು ಮಾರುಕಟ್ಟೆ ಸಹಕಾರ ಒಕ್ಕೂಟದ ಹೆಸರು ಶಿಫಾರಸುಗೊಂಡಿತ್ತು.
ಶ್ರೀಜಾ ಹಾಲು ಒಕ್ಕೂಟವು ಆಂಧ್ರ ಪ್ರದೇಶದ 11 ಜಿಲ್ಲೆಗಳು, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತನ್ನ ವಹಿವಾಟು ಹೊಂದಿದೆ. ಪ್ರತಿ ನಿತ್ಯ 5.5 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ವಾರ್ಷಿಕ ₹1 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ.
ಪ್ರಶಸ್ತಿ ಲಭಿಸಿದ್ದರ ಕುರಿತು ಪ್ರತಿಕ್ರಿಯಿಸಿರುವ ಶ್ರೀಜಾ ಡೈರಿಯ ಸಿಇಒ ಜಯತೀರ್ಥ ಛಾರಿ, ‘ಹೈನುಗಾರಿಕೆ ಅವಲಂಬಿಸಿರುವ ಮಹಿಳೆಯರೇ ನಡೆಸುತ್ತಿರುವ ನಮ್ಮ ಡೈರಿಗೆ ಪ್ರಶಸ್ತಿ ಲಭಿಸಿರುವುದು ನಮ್ಮ ಸಂಸ್ಥೆ ಮಾತ್ರವಲ್ಲ, ಇಡೀ ದೇಶದ ರೈತ ಮಹಿಳೆಯರಿಗೆ ಸಂದ ಗೌರವವಾಗಿದೆ’ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಪಶುಸಂಗೋಪನಾ ಹಾಗೂ ಡೈರಿ ಇಲಾಖೆಯ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.